ತಿರುವನಂತಪುರಂ: ಕೇರಳ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಹೋರಾಟ ನಡೆಸುತ್ತಿದ್ದಾರೆ.
ಇದರಲ್ಲಿ ಸಾಂಪ್ರದಾಯಿಕ ಚುನಾವಣಾ ಪ್ರಚಾರದ ಜೊತೆ ಡಿಜಿಟಲ್ ಪ್ರಚಾರವೂ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಬಹುತೇಕ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಹಾಗೂ ಕೆಲ ಪಕ್ಷೇತರ ಸೃಜನಾತ್ಮಕ ಅಭ್ಯರ್ಥಿಗಳ ಪ್ರಚಾರ ಡಿಜಿಟಲ್ ವೇದಿಕೆಯಲ್ಲೇ ಹೆಚ್ಚು ಗಮನ ಸೆಳೆಯುತ್ತಿದೆ.
ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಂ ಅಂತಹ ಪ್ರಮುಖ ಸಾಮಾಜಿಕ ಜಾಲತಾಣಗಳ ಬಳಕೆ ಜೊತೆ ಎಐ ಆಧಾರಿತ ವಿಡಿಯೊಗಳನ್ನು ಅಭ್ಯರ್ಥಿಗಳು ಹೆಚ್ಚು ಬಳಸುತ್ತಿದ್ದಾರೆ.
ಅದರಲ್ಲೂ ಬಿಜೆಪಿ ಅಭ್ಯರ್ಥಿಗಳು ಎಐ ಆಧಾರಿತ ಪ್ರಚಾರದ ಹಾಗೂ ಇತರ ಗಮನ ಸೆಳೆಯುವ ವಿಡಿಯೊಗಳನ್ನು ಹೆಚ್ಚು ಬಳಸುತ್ತಿದ್ದಾರೆ.
ಈ ಎಐ ವಿಡಿಯೊಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ತಮ್ಮ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಇತರ ತಮ್ಮ ನೆಚ್ಚಿನ ಪ್ರಮುಖರನ್ನು ಬಳಸಿಕೊಳ್ಳುತ್ತಿದ್ದಾರೆ. ಅವರು ವಿಡಿಯೊಗಳಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿ ಮತಯಾಚನೆ ಮಾಡುವುದು, ರೋಡ್ ಶೋ ಮಾಡುವುದು, ಅವರ ಪರವಾಗಿ ಭಾಷಣ ಮಾಡುವ ಮತ್ತು ವಿರೋಧಿಗಳನ್ನು ನಾಯಕರು ಹಣೆಯುತ್ತಿದ್ದಾರೆ.
ಈ ವಿಡಿಯೊಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಿವೆ ಎಂದರೆ, ಅಭ್ಯರ್ಥಿಗಳು ನಿಜವಾಗಿಯೂ ಈ ರೀತಿ ಪ್ರಚಾರಾ ಮಾಡುತ್ತಿದ್ದಾರೆ ಎಂಬ ಭಾವನೆಯನ್ನೇ ಹಲವರಲ್ಲಿ ಸೃಷ್ಟಿಸುತ್ತಿವೆ.
ಅಲ್ಲದೇ ಹೀಗೆ ಸೃಷ್ಟಿಯಾಗುತ್ತಿರುವ ಮತಯಾಚನೆ ವಿಡಿಯೊಗಳಲ್ಲಿ ನಾಯಕರ ಜೊತೆ ಅಭ್ಯರ್ಥಿಗಳಿಗೆ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ!
ಇದರ ಪರಿಣಾಮವಾಗಿ ಆಡಳಿತಾರೂಢ ಎಲ್‌ಡಿಎಫ್ ಹಾಗೂ ವಿರೋಧ ಪಕ್ಷವಾದ ಯುಡಿಎಫ್ ಹಾಗೂ ಇತರ ಪಕ್ಷದ ಅಭ್ಯರ್ಥಿಗಳೂ ಎಐ ಆಧಾರಿತ ಪ್ರಚಾರದ ವಿಡಿಯೊಗಳ ಮೊರೆ ಹೋಗುತ್ತಿದ್ದಾರೆ.
ಪ್ರಮುಖವಾಗಿ ಬಿಜೆಪಿ ಅಭ್ಯರ್ಥಿಗಳು ಪಿಣರಾಯಿ ವಿಜಯನ್ ಸರ್ಕಾರವನ್ನು ಟೀಕಿಸಲು ಶಬರಿಮಲೆ ಚಿನ್ನ ಕಳ್ಳತನ ಪ್ರಕರಣವನ್ನು ಎಐ ವಿಡಿಯೊಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಎಐ ವಿಡಿಯೊಗಳ ಹಾವಳಿಯಿಂದ ಜನರು ನಿಜ ಯಾವುದು? ಸುಳ್ಳು ಯಾವುದು ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಹಿಂದಿನ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಸಾರಿಯ ಚುನಾವಣಾ ರಣ ಕಣ ಡಿಜಿಟಲ್ ವೇದಿಕೆಯಲ್ಲೇ ಹೆಚ್ಚು ಸಕ್ರಿಯವಾಗಿದೆ.

