ನವದೆಹಲಿ: ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ ವಿಚಾರವಾಗಿ ಜನರಲ್ಲಿ ಆತಂಕ ಸೃಷ್ಟಿಸಲು ಯತ್ನಿಸುತ್ತಿರುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
'ಇಂತಹ ಪ್ರಯತ್ನಗಳಲ್ಲಿ ತೊಡಗಿರುವವರು ತಮ್ಮ ಮುಖವಾಡಗಳನ್ನು ತಾವೇ ಕಳಚುತ್ತಿರುವುದು ಮಾತ್ರವಲ್ಲ, ದೇಶಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.
'ಎನ್‌ಎಕ್ಸ್‌ಟಿ ಶೃಂಗಸಭೆ'ಯಲ್ಲಿ ಮಾತನಾಡಿದ ಅವರು,'ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಸಂಕಷ್ಟ ಎದುರಿಸದ ದೇಶವೇ ಇಲ್ಲ. ಆದರೆ, ಈ ವಿದ್ಯಮಾನಗಳಿಂದ ಎದುರಾಗಿರುವ ಸವಾಲುಗಳನ್ನು ಎದುರಿಸಲು ಭಾರತ ಸಂಪೂರ್ಣ ಸಜ್ಜಾಗಿದೆ. ದೇಶದ ಇಂಧನ ಸುರಕ್ಷತೆ ಕಾಪಾಡುವುದಕ್ಕೆ ಸಂಬಂಧಿಸಿ ಯಾವುದೇ ಅವಕಾಶವನ್ನೂ ಬಿಟ್ಟುಕೊಡುವುದಿಲ್ಲ' ಎಂದರು.
'ಪ್ರಸ್ತಕ ಸನ್ನಿವೇಶದ ದುರುಪಯೋಗಪಡಿಸಿಕೊಳ್ಳುವ ಮೂಲಕ ಕೆಲವರು ನಿರ್ದಿಷ್ಟ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಇಂತಹ ಕುತಂತ್ರ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಮೋದಿ ಎಚ್ಚರಿಸಿದರು.

