HEALTH TIPS

ಮಾಜಿ CJI ದೀಪಕ್ ಮಿಶ್ರಾ ಪ್ರಕರಣಗಳಿಗೆ 1 ಕೋಟಿ ರೂ. ಪಾವತಿ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರನ್ನು ರಕ್ಷಿಸಲು ತಾನು ದಾಖಲಿಸಿದ್ದ ಪ್ರಕರಣಗಳ ಶುಲ್ಕವಾಗಿ ಒಂದು ಕೋಟಿ ರೂ. ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ವಕೀಲ ಅಶೋಕ್ ಪಾಂಡೆ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ನ್ಯಾಯಪೀಠ, ಈ ಅರ್ಜಿ ತಪ್ಪು ಗ್ರಹಿಕೆಯದ್ದಾಗಿದೆ ಎಂದು ಅಭಿಪ್ರಾಯಪಟ್ಟಿತು. ಅವರ ಅರ್ಜಿಯನ್ನು ಹೈಕೋರ್ಟ್ ಸೂಕ್ತವಾಗಿಯೇ ವಜಾಗೊಳಿಸಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

"ನೀವು ಯಾವುದೇ ವೆಚ್ಚಗಳನ್ನು ಭರಿಸಿಲ್ಲ. ನೀವು ವೈಯಕ್ತಿಕವಾಗಿ ಹಾಜರಾಗಿದ್ದೀರಿ," ಎಂದು ಅಶೋಕ್ ಪಾಂಡೆಯನ್ನು ಉದ್ದೇಶಿಸಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ಅದಕ್ಕೆ ಪ್ರತಿಯಾಗಿ, "ನಾನು ಮೊಕದ್ದಮೆಯನ್ನು ನಡೆಸಲು ಸುಮಾರು 2 ಲಕ್ಷ ರೂ. ವೆಚ್ಚ ಮಾಡಿದ್ದೇನೆ. ಈ ಹಣವನ್ನು ನನ್ನ ಪುತ್ರಿಯಿಂದ ಪಡೆದಿದ್ದೆ," ಎಂದು ಅಶೋಕ್ ಪಾಂಡೆ ಪ್ರತಿವಾದ ಮಂಡಿಸಿದರು.

ಇದಲ್ಲದೆ, ಮಾನ್ಯ ಮುಖ್ಯ ನ್ಯಾಯಮೂರ್ತಿಗಳಿಗೆ ಮಾಜಿ ನ್ಯಾಯಾಧೀಶರೊಂದಿಗೆ ಸಂಬಂಧವಿದೆ ಎಂದೂ ಅಶೋಕ್ ಪಾಂಡೆ ಹೇಳಿದರು. ಅದಕ್ಕೆ ಪ್ರತಿಯಾಗಿ, "ನ್ಯಾಯಾಧೀಶರೊಬ್ಬರ ವಿರುದ್ಧ ಎಲ್ಲ ಕೊಳಕು ಆರೋಪಗಳನ್ನು ಮಾಡಿದ ಬಳಿಕ, 'ಮಾನ್ಯರೆ' ಎಂಬ ಪದವನ್ನು ಏಕೆ ಬಳಸುತ್ತಿದ್ದೀರಿ?" ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಕಿಡಿಕಾರಿದರು.

ಮಾಜಿ ಮುಖ್ಯ ನ್ಯಾಯಾಧೀಶರು ವಾಗ್ದಂಡನೆಯನ್ನು ಎದುರಿಸುವಾಗ ಯಾರೂ ಅವರ ನೆರವಿಗೆ ಬರಲಿಲ್ಲ ಎಂದು ಅರ್ಜಿದಾರ ಅಶೋಕ್ ಪಾಂಡೆ ಹೇಳಿದರು. ಅದಕ್ಕೆ ಪ್ರತಿಯಾಗಿ, "ಯಾರೂ ಕೂಡ ಸಾಮಾಜಿಕ ಸೇವೆಗೆ ಹಣಕಾಸಿನ ಮರುಪಾವತಿಯನ್ನು ನಿರೀಕ್ಷಿಸಬಾರದು," ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವ್ಯಂಗ್ಯವಾಗಿ ಹೇಳಿದರು.

"ನೀವು ಸಂಸ್ಥೆಗೆ ಅದ್ಭುತ ಸಾಮಾಜಿಕ ಸೇವೆಯನ್ನು ನೀಡಿದ್ದೀರಿ. ಅದಕ್ಕೆ ಹೇಗೆ ನೀವು ಒಂದು ಕೋಟಿ ಅಥವಾ ಎರಡು ಕೋಟಿ ರೂ. ಎಂದು ಬೆಲೆ ಕಟ್ಟುತ್ತೀರಿ?" ಎಂದು ಅವರು ವಕೀಲ ಅಶೋಕ್ ಪಾಂಡೆಯನ್ನು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರನ್ನು ಅವಮಾನ, ಕಿರುಕುಳ ಮತ್ತು ಪದಚ್ಯುತಿಯಿಂದ ತಪ್ಪಿಸಿ ಅವರನ್ನು ರಕ್ಷಿಸಲು ನಾನು ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ಪ್ರಕರಣಗಳನ್ನು ದಾಖಲಿಸಿದ್ದೇನೆ. ಹೀಗಾಗಿ, ಆ ಪ್ರಕರಣಗಳ ವೆಚ್ಚವಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಒಂದು ಕೋಟಿ ರೂ. ಮರುಪಾವತಿಸುವಂತೆ ಸೂಚಿಸಬೇಕು ಎಂದು ವಕೀಲ ಅಶೋಕ್ ಪಾಂಡೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅಲಹಾಬಾದ್ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries