HEALTH TIPS

ಲೋಕಸಭೆಯಲ್ಲಿ ಎಲ್‌ಪಿಜಿ ಕೊಲಾಹಲ:ಬಿಜೆಪಿ ವಿರುದ್ಧ ಮುಂದುವರಿದ ಕಾಂಗ್ರೆಸ್ ವಾಕ್ಸಮರ

ನವದೆಹಲಿ: ಸ್ಪೀಕರ್‌ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಗೆ ಸೋಲಾದರೂ, ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಕ್ಸಮರ ಗುರುವಾರವೂ ಮುಂದುವರಿಯಿತು. 

ಪಶ್ಚಿಮ ಏಷ್ಯಾ ಸಂಘರ್ಷದಿಂದ ದೇಶದಾದ್ಯಂತ ಉಂಟಾಗಿರುವ ಎಲ್‌ಪಿಜಿ ಸಿಲಿಂಡರ್‌ ಪೂರೈಕೆ ಕೊರತೆಯನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, 'ಪ್ರಧಾನಿ ಅಮೆರಿಕದೊಂದಿಗೆ ಮಾಡಿಕೊಂಡಿರುವ 'ರಾಜಿ ಒಗಟ'ನ್ನು ಬಿಡಿಸಿದ್ದೇನೆ' ಎಂದರು.

ಆದರೆ, ಎಲ್‌ಪಿಜಿ ವಿಷಯವಾಗಿ ಪೆಟ್ರೋಲಿಯಂ ಸಚಿವ ಹರದೀಪ್‌ಸಿಂಗ್‌ ಪುರಿ ಅವರನ್ನು ಎಪ್‌ಸ್ಟೈನ್‌ ಫೈಲ್ಸ್‌ ಜತೆಗೆ ನಂಟು ಹಾಕಲು ಪ್ರಯತ್ನಿಸಿದಾಗ, ರಾಹುಲ್‌ ಭಾಷಣಕ್ಕೆ ಸ್ಪೀಕರ್ ತಡೆಯೊಡ್ಡಿದರು.

'ಸದನದಲ್ಲಿ ಮಾತನಾಡಲು ತಮಗೆ ಪದೇ ಪದೇ ಅವಕಾಶ ನಿರಾಕರಿಸಲಾಗುತ್ತಿದೆ' ಎಂದು ರಾಹುಲ್‌ ಸ್ಪೀಕರ್‌ ವಿರುದ್ಧ ಆರೋಪಿಸಿದ್ದರು. ಅವಿಶ್ವಾಸ ನಿರ್ಣಯಕ್ಕೆ ಸೋಲಾದ ಬೆನ್ನಲ್ಲೇ, ಸದನದಲ್ಲಿ ವಿರೋಧ ಪಕ್ಷದ ನಾಯಕನಿಗೆ, 'ವಿಶೇಷ ಸೌಲಭ್ಯ ಇರುವುದಿಲ್ಲ' ಎಂದು ಸ್ಪೀಕರ್‌ ಹೇಳಿದ್ದರು.

ಗುರುವಾರ ಕಲಾಪ ಆರಂಭಗೊಂಡಾಗ ಮತ್ತೆ ಇಬ್ಬರೂ ಮುಖಾಮುಖಿಯಾದರು. 'ದೇಶದ ಇಂಧನ ಮತ್ತು ಆರ್ಥಿಕ ಭದ್ರತೆಯ ಬಗ್ಗೆ ಮಾತನಾಡುವುದಾಗಿ ರಾಹುಲ್‌ ಹೇಳಿದರೂ, ಮುಂಚಿತವಾಗಿ ನೋಟಿಸ್‌ ನೀಡದೆ ಸಂಸದರ ವಿರುದ್ಧ ಆರೋಪ ಮಾಡಲು ಅವಕಾಶ ಇಲ್ಲ' ಎಂದ ಸ್ಪೀಕರ್‌, ರಾಹುಲ್‌ ಮಾತು ಮುಂದುವರಿಸಲು ಅವಕಾಶ ನಿರಾಕರಿಸಿದರು.

ರಾಹುಲ್‌ ಅವರಿಗೆ ಮಾತು ಮುಂದುವರಿಸಲು ಅವಕಾಶ ನೀಡುವಂತೆ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್‌ ಮನವಿ ಮಾಡಿದರು. ಸ್ಪೀಕರ್‌ ಅವಕಾಶ ನಿರಾಕರಿಸಿದಾಗ ಕಾಂಗ್ರೆಸ್‌ ಸಂಸದರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು.

ಒಗಟು ಬಿಡಿಸಿದ್ದೇನೆ: 'ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತ ಅಮೆರಿಕದ ಅನುಮತಿ ಪಡೆಯಬೇಕಾಗಿದೆ ಹಾಗೂ ತೈಲ, ಅನಿಲ ಪೂರೈಕೆದಾರ ದೇಶಗಳನ್ನು ಆಯ್ದುಕೊಳ್ಳಲು ಭಾರತಕ್ಕಿರುವ ಹಕ್ಕನ್ನು ಅಮೆರಿಕದೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ. ಇಂಧನ ಭದ್ರತೆ ಪ್ರತಿಯೊಂದು ದೇಶದ ಅಡಿಪಾಯವಾಗಿದ್ದು, ಪ್ರಧಾನಿಯ ರಾಜಿ ಒಗಟನ್ನು ನಾನು ಬಿಡಿಸಿದ್ದೇನೆ' ಎಂದು ರಾಹುಲ್‌ ಹೇಳಿದರು.

ಶೂನ್ಯ ವೇಳೆಯಲ್ಲಿ ಮತ್ತೆ ವಿಷಯ ಪ್ರಸ್ತಾಪಿಸಲು ರಾಹುಲ್ ಮುಂದಾದರು. ಆದರೆ, ಪೆಟ್ರೋಲಿಯಂ ಸಚಿವರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ ಮತ್ತು ಹರದೀಪ್‌ಸಿಂಗ್‌ ಪುರಿ ಲಭ್ಯವಿದ್ದಾಗ ಸದನದಲ್ಲಿ ಈ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲಾಗುವುದು ಎಂದು ಸ್ಪೀಕರ್‌ ಹೇಳಿದರು.

'ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಣೆ'

'ಲೋಕಸಭೆಯ ಕಲಾಪ ಕಟ್ಟುನಿಟ್ಟಾಗಿ ಸದನದ ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು ನಡೆಯುತ್ತದೆ. ಇದು ಸದಸ್ಯರಿಗೆ ಸ್ವೀಕಾರಾರ್ಹವೋ ಇಲ್ಲವೋ ಎನ್ನುವುದನ್ನು ಪರಿಗಣಿಸುವುದಿಲ್ಲ. ಆದರೆ, ಎಲ್ಲ ಸದಸ್ಯರಿಗೂ ನ್ಯಾಯಸಮ್ಮತ ರೀತಿಯಲ್ಲಿ ಇರುತ್ತದೆ' ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಗೆ ಸೋಲಾದ ಬಳಿಕ ಗುರುವಾರ ಲೋಕಸಭೆಯಲ್ಲಿ ನಡೆದ ಕಲಾಪದಲ್ಲಿ ಅವರು ಮಾತನಾಡಿದರು.

'ಸ್ಪೀಕರ್‌ ಪೀಠವು ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ, ಅದು ಲೋಕಸಭೆಯ ಘನತೆಯ ಸಂಕೇತ. ಮುಂದೆಯೂ ಕಟ್ಟುನಿಟ್ಟಾಗಿ ಮತ್ತು ನಿಷ್ಪಕ್ಷಪಾತವಾಗಿ ಕರ್ತವ್ಯವನ್ನು ನಿರ್ವಹಿಸುತ್ತೇನೆ' ಎಂದು ಬಿರ್ಲಾ ಹೇಳಿದರು. ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು.

ಅವಿಶ್ವಾಸ ನಿರ್ಣಯ ಮಂಡನೆ ಮೇಲಿನ ಚರ್ಚೆಯಲ್ಲಿ ತಮ್ಮನ್ನು ಬೆಂಬಲಿಸಿದ ಸಂಸದರನ್ನು ಬಿರ್ಲಾ ಅಭಿನಂದಿಸಿದರು.

'ಸದನದಲ್ಲಿ ಮಾತನಾಡುವ ಹಕ್ಕು ಎಲ್ಲ ಸದಸ್ಯರಿಗೆ ಇದೆ. ಯಾರು, ಯಾವ ಸಮಯದಲ್ಲಿ ಬೇಕಾದರೂ ಯಾವುದೇ ವಿಷಯದ ಕುರಿತು ಮಾತನಾಡಬಹುದು. ಆದರೆ, ಸ್ಪೀಕರ್‌ ಅನುಮತಿಯನ್ನು ಪಡೆದಿರಬೇಕು. ಪೀಠದ ಅಧ್ಯಕ್ಷರ ಅನುಮತಿ ಇಲ್ಲದೆ ಪ್ರಧಾನಿ ಸೇರಿದಂತೆ ಯಾರಿಗೂ ಮಾತನಾಡುವ ಅವಕಾಶ ಇಲ್ಲ. ಸದನದ ನಿಯಮಗಳಿಗೆ ಎಲ್ಲರೂ ಬದ್ಧ' ಎಂದು ಅವರು ಹೇಳಿದರು.

ಪೀಠಕ್ಕೆ ಮರಳಿದ ಬಿರ್ಲಾ

ಬಜೆಟ್‌ ಅಧಿವೇಶನದ ಮೊದಲ ಭಾಗ ಜನವರಿ 28ರಿಂದ ಫೆಬ್ರುವರಿ 13ರವರೆಗೆ ನಡೆದಿತ್ತು. ಮೊದಲ ಅವಧಿಯಲ್ಲಿ ಸ್ವೀಕರ್‌ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್‌ ನೀಡಲಾಗಿತ್ತು. ನೋಟಿಸ್ ಸಲ್ಲಿಸಿದ ದಿನಾಂಕದಿಂದ ಬಿರ್ಲಾ ಅವರು ಸದನದ ಕಲಾಪಗಳಿಂದ ಹಿಂದೆ ಸರಿದಿದ್ದರು. ಕಾರ್ಯಸೂಚಿ ಇತ್ಯರ್ಥವಾದ ನಂತರವೇ ಅವರು ಮರಳುತ್ತಾರೆ ಎಂದು ಲೋಕಸಭಾ ಸಚಿವಾಲಯ ತಿಳಿಸಿತ್ತು. ಬಜೆಟ್ ಅಧಿವೇಶನದ ದ್ವಿತೀಯಾರ್ಧ ಮಾರ್ಚ್‌ 9ರಿಂದ ಆರಂಭಗೊಂಡಿತ್ತು. ಆದರೆ, ಸ್ಪೀಕರ್‌ ಕಲಾಪದಲ್ಲಿ ಭಾಗವಹಿಸಿರಲಿಲ್ಲ. ಗುರುವಾರ ಅವರು ಪೀಠಕ್ಕೆ ಮರಳಿದ್ದಾರೆ.

ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ಮುಖಂಡಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ತೈಲ ಬಿಕ್ಕಟ್ಟು ದೇಶದಾದ್ಯಂತ ಆತಂಕ ಸೃಷ್ಟಿಸಿದ್ದು ಹೋಟೆಲ್‌ ರೆಸ್ಟೋರೆಂಟ್‌ಗಳು ಮುಚ್ಚಿವೆ ಬೀದಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ

ಪ್ರಧಾನಿ ಕಂಗಾಲು: ರಾಹುಲ್‌ವಾಗ್ದಾಳಿ

'ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹೇಳುತ್ತಿರುವ ಪ್ರಧಾನಿ ಈಗ ಬೇರೆ ಕಾರಣಗಳಿಂದ ಸ್ವತಃ ತಾವೇ ಗಾಬರಿಗೊಂಡಿದ್ದಾರೆ' ಎಂದು ರಾಹುಲ್‌ ಗಾಂಧಿ ಹೇಳಿದರು. 'ಎಪ್‌ಸ್ಟೈನ್‌ ಫೈಲ್ಸ್‌ ಮತ್ತು ಅದಾನಿ ವಿರುದ್ಧ ಅಮೆರಿಕದ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಿಂದ ಪ್ರಧಾನಿ ಭಯಗೊಂಡಿದ್ದಾರೆ' ಎಂದು ಅವರು ಹೇಳಿದರು.

ದೇಶ ಒಡೆಯಲು ರಾಹುಲ್‌ ಪಿತೂರಿ: ದುಬೆ

'ಚೀನಾ ರಷ್ಯಾ ಮತ್ತು ಅಮೆರಿಕ ಭಾರತದ ಮೇಲೆ ಒಟ್ಟಾಗಿ ದಾಳಿ ಮಾಡಿದರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ' ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ. ಗುರುವಾರ ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್‌ ಗಾಂಧಿ ಅವರು ದೇಶವನ್ನು ಒಡೆಯುವ ಪಿತೂರಿ'ಯಲ್ಲಿ ಭಾಗಿಯಾಗಿದ್ದಾರೆ' ಎಂದು ಆರೋಪಿಸಿದರು.

ಸಿಇಸಿ ಪದಚ್ಯುತಿ: 193 ಸಂಸದರ ಸಹಿ

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಅವರನ್ನು ಪದಚ್ಯುತಗೊಳಿಸುವ ನಿರ್ಣಯ ಮಂಡಿಸಲು ಸಲ್ಲಿಸುವ ನೋಟಿಸ್‌ನ ಪ್ರತಿಗೆ ಇದುವರೆಗೆ ಲೋಕಸಭೆಯ 130 ಹಾಗೂ ರಾಜ್ಯಸಭೆಯ 63 ಸದಸ್ಯರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿರೋಧ ಪಕ್ಷಗಳ ಸಂಸದರು ಮಾರ್ಚ್‌ 11ರಿಂದ ಸಿಇಸಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಶುಕ್ರವಾರ ಸದನದಲ್ಲಿ ನೋಟಿಸ್‌ ಸಲ್ಲಿಸುವ ಯೋಜನೆ ಇದ್ದು ಮೊದಲು ಯಾವ ಸದನದಲ್ಲಿ ನೋಟಿಸ್‌ ಸಲ್ಲಿಸಲಿದ್ದಾರೆ ಎನ್ನುವುದು ಖಚಿತಗೊಂಡಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries