ಲಖನೌ: ಮದುವೆಯಾಗಿರುವ ಪುರುಷ ಹಾಗೂ ವಯಸ್ಕ ಮಹಿಳೆ ನಡುವಿನ ಒಪ್ಪಿತ ಸಹಜೀವನದ ಸಂಬಂಧವು ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
'ಇಂತಹ ಪ್ರಕರಣಗಳಲ್ಲಿ ನೈತಿಕತೆ ಮತ್ತು ಕಾನೂನನಾತ್ಮಕ ಅಂಶಗಳನ್ನು ಪ್ರತ್ಯೇಕವಾಗಿ ನೋಡಬೇಕು' ಎಂದಿರುವ ಹೈಕೋರ್ಟ್,'ನೈತಿಕತೆಯು ನ್ಯಾಯಾಲಯ ಕೈಗೊಳ್ಳುವ ಕ್ರಮದ ಮೇಲೆ ಪ್ರಭಾವ ಬೀರುವುದಿಲ್ಲ' ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಜೆ.ಮುನಿರ್ ಹಾಗೂ ತರುಣ್ ಸಕ್ಸೇನಾ ಅವರು ಇದ್ದ ವಿಭಾಗೀಯ ಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.
ಈ ಜೋಡಿ ವಿರುದ್ಧ, ಸಹಜೀವನ ನಡೆಸುತ್ತಿರುವ ಮಹಿಳೆಯ ತಾಯಿ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಜೈತಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಈ ಜೋಡಿ ವಿರುದ್ಧ ಭಾರತೀಯ ನ್ಯಾಯಸಂಹಿತೆ(ಬಿಎನ್‌ಎಸ್) ಸೆಕ್ಷನ್ 87ರ(ಮಹಿಳೆಯನ್ನು ಮದುವೆಯಾಗುವಂತೆ ಬಲವಂತಪಡಿಸುವುದು ಇಲ್ಲವೇ ಅಪಹರಿಸುವುದು) ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು.
ತಮ್ಮ ವಿರುದ್ಧದ ಎಫ್‌ಐಆರ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಜೋಡಿ, ತಮಗೆ ಜೀವ ಬೆದರಿಕೆ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.
ಅರ್ಜಿಯ ವಿಚಾರಣೆ ವೇಳೆ,'ನೈತಿಕತೆ ಮತ್ತು ಕಾನೂನನ್ನು ಪ್ರತ್ಯೇಕವಾಗಿಯೇ ನೋಡಬೇಕು. ಪುರುಷ ವಿವಾಹಿತನಾಗಿದ್ದರೂ ವಯಸ್ಕ ಮಹಿಳೆಯೊಂದಿಗಿನ ಆತನ ಸಹಜೀವನ ಒಪ್ಪಿತ ಸಂಬಂಧವೇ ಆಗಿದೆ. ಮೇಲ್ನೋಟಕ್ಕೆ ಆತ ಯಾವ ಅಪರಾಧವನ್ನೂ ಎಸಗಿಲ್ಲ' ಎಂದು ಪೀಠ ಹೇಳಿದೆ.
'ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯ ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಾಮಾಜಿಕ ಅಭಿಪ್ರಾಯಗಳು ಮತ್ತು ನೈತಿಕತೆ ನಿರ್ದೇಶಿಸುವಂತಿಲ್ಲ' ಎಂದು ಪೀಠವು ಬುಧವಾರ ನೀಡಿರುವ ಆದೇಶದಲ್ಲಿ ಹೇಳಿದೆ.
ಅರ್ಜಿದಾರರಿಗೆ ರಕ್ಷಣೆ ಒದಗಿಸುವುದು ಪೊಲೀಸರ ಕರ್ತವ್ಯ ಎಂದು ಹೇಳಿರುವ ಪೀಠ, ಅವರನ್ನು ಬಂಧಿಸದಂತೆ ಸೂಚಿಸಿದೆ. ಅಲ್ಲದೆ, ಮಹಿಳೆಯ ಪಾಲಕರು ಹಾಗೂ ಆಕೆಯ ಕುಟುಂಬದ ಇತರ ಸದಸ್ಯರು, ಈ ಜೋಡಿಯ ಮನೆಯನ್ನು ಪ್ರವೇಶಿಸಬಾರದು ಅಥವಾ ಅವರನ್ನು ಸಂಪರ್ಕಿಸಬಾರದು ಇಲ್ಲವೇ ಅವರಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು. ಅವರ ಸುರಕ್ಷತೆಯನ್ನು ಪೊಲೀಸರು ಖಾತ್ರಿಪಡಿಸಬೇಕು ಎಂದು ಪೀಠವು ಪೊಲೀಸರಿಗೆ ನಿರ್ದೇಶನ ನೀಡಿದೆ.

