ನವದೆಹಲಿ: ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟು ಎದುರಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ಸಚಿವರ ತಂಡವನ್ನು ಕೇಂದ್ರ ಸರ್ಕಾರ ಔಪಾಚಾರಿಕವಾಗಿ ರಚಿಸಿದೆ.
ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಹರದೀಪ್ ಸಿಂಗ್ ಪುರಿ ಅವರು ಸಮಿತಿಯಲ್ಲಿರುವ ಇತರೆ ಸದಸ್ಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಸೃಷ್ಟಿಯಾಗಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಮೆರಿಕ-ಇಸ್ರೇಲ್ ದೇಶವು ಫೆಬ್ರುವರಿ 28ರಂದು ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ್ದರಿಂದ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇರಾನ್ ಕೂಡ ಪ್ರತಿದಾಳಿ ನಡೆಸಿದ್ದರಿಂದ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು. ಯುದ್ಧವೂ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಈಗಿನ ಸ್ಥಿತಿಯಲ್ಲಿ ತಕ್ಷಣವೇ ಮುಗಿಯುವ ಲಕ್ಷಣ ಕಂಡುಬರುತ್ತಿಲ್ಲ.
ಯುದ್ಧದಿಂದ ಜಾಗತಿಕ ಆರ್ಥಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕಚ್ಚಾತೈಲ, ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಉಂಟಾಗಿದೆ.

