ಚೆನ್ನೈ: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷ ಎಐಎಡಿಎಂಕೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಕೆಲ ಹಾಲಿ ಶಾಸಕರು ಹಾಗೂ ಮಾಜಿ ಸಚಿವರಿಗೆ ಅವಕಾಶ ನೀಡಲಾಗಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು 2021ರ ಚುನಾವಣೆಯಲ್ಲಿ ಗೆದ್ದಿದ್ದ ತಿರುನಲ್ವೇಲಿ ಕ್ಷೇತ್ರವೂ ಸೇರಿದಂತೆ ಒಟ್ಟು 127 ಸ್ಥಾನಗಳಿಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ತಿರುನಲ್ವೇಲಿ ಕ್ಷೇತ್ರದಿಂದ ಹಿರಿಯ ನಾಯಕ ತಚೈ ಎನ್. ಗಣೇಶ ರಾಜ ಅವರನ್ನು ಪಕ್ಷವು ಕಣಕ್ಕಿಳಿಸಿದೆ.
ಸತ್ತೂರು ಕ್ಷೇತ್ರದಿಂದ (ವಿರುಧುನಗರ ಜಿಲ್ಲೆ) ಸ್ಪರ್ಧಿಸುವುದಾಗಿ ನಾಗೇಂದ್ರನ್ ಈ ಹಿಂದೆ ಹೇಳಿದ್ದರು.
ಮಾಜಿ ಸಚಿವ ಬಿ.ವಿ. ರಮಣ ಅವರನ್ನು ತಿರುವಲ್ಲೂರು, ಹಾಲಿ ಶಾಸಕ ಪೊಲ್ಲಾಚಿ ವಿ. ಜಯರಾಮನ್ ಅವರನ್ನು ಪೊಲ್ಲಾಚಿ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಸಲಾಗಿದೆ.
'ಕಮಲ' 'ಎರಡು ಎಲೆ' ಚಿಹ್ನೆಯಡಿ ಅಭ್ಯರ್ಥಿಗಳ ಸ್ಪರ್ಧೆ
ಚೆನ್ನೈ: ಎನ್‌ಡಿಎ ಮೈತ್ರಿಕೂಟದ ತಮಿಳು ಮಾನಿಲ ಕಾಂಗ್ರೆಸ್- ಮೂಪನಾರ್ (ಟಿಎಂಸಿ-ಎಂ) ಹಾಗೂ ಇಂಡಿಯಾ ಜನನಾಯಕ ಕಚ್ಚಿ (ಐಜೆಕೆ) ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಶುಕ್ರವಾರ ಘೋಷಿಸಿವೆ. ಬಿಜೆಪಿಯ 'ಕಮಲ' ಚಿಹ್ನೆಯಡಿ ಟಿಎಂಸಿ-ಎಂ ಮತ್ತು ಎಐಎಡಿಎಂಕೆಯ 'ಎರಡು ಎಲೆ' ಚಿಹ್ನೆಯಡಿ ಐಜೆಕೆ ಸ್ಪರ್ಧಿಸಲಿವೆ. ಟಿಎಂಸಿ-ಎಂ ಪಕ್ಷದ ನಾಯಕ ಕೇಂದ್ರದ ಮಾಜಿ ಸಚಿವ ಜಿ.ಕೆ. ವಾಸನ್ ಅವರು ತಮ್ಮ ಪಕ್ಷಕ್ಕೆ ಹಂಚಿಕೆಯಾಗಿರುವ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಐಜೆಕೆ ನಾಯಕ ಮಾಜಿ ಸಂಸದ ಪಾರಿವೇಂದರ್ ಅವರು ಎರಡು ಕ್ಷೇತ್ರಗಳಿಗೆ ಆಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದಾರೆ.

