ಮುಂಬೈ: ಜನವರಿ 28ರಂದು ಬಾರಾಮತಿ ಬಳಿ ನಡೆದ ವಿಮಾನ ಅಪಘಾತದಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರರು ಮೃತಪಟ್ಟ ಘಟನೆಯ ಕುರಿತು ಎನ್ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಪ್ರಶ್ನೆಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ, ಈ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮನವಿ ಮಾಡಿದ್ದಾರೆ.
ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಹಾಗೂ ಇನ್ನಿತರ ನಾಲ್ವರು ಸೇರಿದಂತೆ ಐವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕೆಲವು ಕಳವಳಗಳನ್ನು ವ್ಯಕ್ತಪಡಿಸಿ ರೋಹಿತ್ ಪವಾರ್ ಮನವಿ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ದೇವೇಂದ್ರ ಫಡ್ನವಿಸ್, "ಘಟನೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಲವು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ" ಎಂದು ಹೇಳಿದ್ದಾರೆ.
"ರೋಹಿತ್ ಪವಾರ್ ಸಲ್ಲಿಸಿರುವ ಮನವಿ ಪತ್ರದಲ್ಲಿ ಹಲವಾರು ಕಳವಳಗಳ ಕುರಿತು ಬೆಳಕು ಚೆಲ್ಲಲಾಗಿದ್ದು, ತನಿಖೆಯ ಸಂದರ್ಭದಲ್ಲಿ ಈ ಕುರಿತು ಜಾಗರೂಕವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ" ಎಂದೂ ಅವರು ಮನವಿ ಮಾಡಿದ್ದಾರೆ.
ಹಲವು ವಲಯಗಳ ಕುರಿತು ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಈ ಪತ್ರದಲ್ಲಿ ಪಟ್ಟಿ ಮಾಡಲಾಗಿದೆ.
ವಿಮಾನಯಾನ ಸಂಸ್ಥೆಯ ಸುರಕ್ಷತಾ ದಾಖಲೆ ಹಾಗೂ 2023ರಲ್ಲಿ ಇದೇ ವಿಆರ್‌ಎಸ್ ವೆಂಚರ್ಸ್ ಸಂಸ್ಥೆಯ ವಿಮಾನ ಭಾಗಿಯಾಗಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ವ್ಯಕ್ತವಾಗಿದ್ದ ಶಾಸನಾತ್ಮಕ ಪಾಲನೆಯ ಕುರಿತ ಅಭಿಪ್ರಾಯಗಳ ಬಗ್ಗೆ ಈ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

