HEALTH TIPS

ಇನ್ಮುಂದೆ ವಿಮಾನದಲ್ಲಿ ಬೇಕಾದ ಸೀಟಿನ ಆಯ್ಕೆಗೆ ಹೆಚ್ಚುವರಿ ಶುಲ್ಕ ನೀಡಬೇಕಿಲ್ಲ!

ನವದೆಹಲಿ: ವಿಮಾನ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕಗಳಿಂದ ಪರಿಹಾರ ಒದಗಿಸಲು ಕೇಂದ್ರ ಸರಕಾರ ಮಹತ್ವದ ಕ್ರಮ ಕೈಗೊಂಡಿದ್ದು, ವಿಮಾನಗಳಲ್ಲಿ ಕನಿಷ್ಠ 60% ಸೀಟುಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದೇ ಪ್ರಯಾಣಿಕರಿಗೆ ಉಚಿತವಾಗಿ ಆಯ್ಕೆ ಮಾಡಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಿದೆ.

ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನ ಪ್ರಯಾಣ ನಿಯಮಗಳಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ದ ಮೂಲಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ವಿಮಾನ ಪ್ರಯಾಣವನ್ನು ಹೆಚ್ಚು ಪಾರದರ್ಶಕ ಮತ್ತು ಪ್ರಯಾಣಿಕ ಸ್ನೇಹಿ ಮಾಡುವುದೇ ಇದರ ಉದ್ದೇಶವಾಗಿದೆ.

ಇದುವರೆಗೆ ಟಿಕೆಟ್ ಬುಕ್ಕಿಂಗ್ ಬಳಿಕ ಅಥವಾ ವೆಬ್ ಚೆಕ್-ಇನ್ ಸಮಯದಲ್ಲಿ ಬೇಕಾದ ಸೀಟಿನ ಆಯ್ಕೆಗೆ ಹಲವು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಶುಲ್ಕ ವಿಧಿಸುತ್ತಿದ್ದವು. ಅದರನ್ವಯ ಟಿಕೇಟು ಬುಕಿಂಗ್ ಮಾಡಿಕೊಂಡ ಬಳಿಕ ತಮಗಿಷ್ಟವಾದ ಸೀಟಿಗೆ ಹೆಚ್ಚುವರಿ ಹಣ ಪಾವತಿಸಬೇಕಿತ್ತು. ಸರಕಾರ ನೀಡಿರುವ ಹೊಸ ನಿರ್ದೇಶನವು ಈ ಪದ್ಧತಿಗೆ ಕಡಿವಾಣ ಹಾಕಿ, ಪ್ರಯಾಣಿಕರಿಗೆ ಬೇಕಾದ ಸೀಟು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ.

ಅಲ್ಲದೇ, ಒಂದೇ PNRನಲ್ಲಿ ಪ್ರಯಾಣಿಸುವವರು ಪಕ್ಕಪಕ್ಕದ ಆಸನಗಳಲ್ಲಿ ಕುಳಿತುಕೊಳ್ಳುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಕುಟುಂಬಗಳು ಹಾಗೂ ತಂಡವಾಗಿ ಪ್ರಯಾಣಿಸುವವರು ಒಟ್ಟಿಗೆ ಕುಳಿತುಕೊಳ್ಳಲು ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿಗೆ ಇದರಿಂದ ಪರಿಹಾರ ದೊರೆಯುವ ನಿರೀಕ್ಷೆಯಿದೆ.

ಪ್ರಯಾಣಿಕರಿಗೆ ಹಾರಾಟದ ಅನುಭವವನ್ನು ಸುಧಾರಿಸಲು, ಕ್ರೀಡಾ ಉಪಕರಣಗಳು ಮತ್ತು ಸಂಗೀತ ವಾದ್ಯಗಳ ಸಾಗಣೆ ಕುರಿತು ಪಾರದರ್ಶಕ ಮಾರ್ಗಸೂಚಿಗಳನ್ನು ರೂಪಿಸುವಂತೆ DGCAಗೆ ಸೂಚಿಸಲಾಗಿದೆ. ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದರ ಜೊತೆಗೆ, ಈ ಸೇವೆಗಳನ್ನು ಸುಗಮಗೊಳಿಸಲು ವಿಮಾನಯಾನ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಸಾಕುಪ್ರಾಣಿಗಳ ಸಾಗಣೆ ಕುರಿತ ಗೊಂದಲ ನಿವಾರಣೆಗೆ ಸ್ಪಷ್ಟ ನೀತಿಗಳನ್ನು ಪ್ರಕಟಿಸುವ ಅಗತ್ಯವಿದೆ ಎಂದು ಸಹ ನಿರ್ದೇಶಿಸಲಾಗಿದೆ.

ವಿಮಾನ ವಿಳಂಬ, ರದ್ದತಿ ಅಥವಾ ಬೋರ್ಡಿಂಗ್ ನಿರಾಕರಣೆ ಸಂದರ್ಭಗಳಲ್ಲಿ ಪ್ರಯಾಣಿಕರ ಹಕ್ಕುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರಕಾರ ಒತ್ತಾಯಿಸಿದೆ. ಈ ಹಕ್ಕುಗಳ ಮಾಹಿತಿ ವಿಮಾನಯಾನ ಸಂಸ್ಥೆಗಳ ವೆಬ್‌ಸೈಟ್‌, ಮೊಬೈಲ್ ಅಪ್ಲಿಕೇಶನ್, ಬುಕಿಂಗ್ ವೇದಿಕೆಗಳು ಹಾಗೂ ವಿಮಾನ ನಿಲ್ದಾಣ ಕೌಂಟರ್ ಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ.

ಪ್ರಯಾಣಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ನೀಡುವುದೂ ಕಡ್ಡಾಯವಾಗಿದ್ದು, ಇದರಿಂದ ಹೆಚ್ಚಿನ ಜನರಿಗೆ ಅರಿವು ಮೂಡಲಿದೆ.

ಭಾರತದ ದೇಶೀಯ ವಾಯುಯಾನ ವಲಯವು ವೇಗವಾಗಿ ವಿಸ್ತರಿಸುತ್ತಿದ್ದು, ಜಾಗತಿಕವಾಗಿ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ದೇಶದ ವಿಮಾನ ನಿಲ್ದಾಣಗಳು ಪ್ರತಿದಿನ ಐದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುತ್ತಿವೆ.

ಈ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ವಿಮಾನ ನಿಲ್ದಾಣಗಳಲ್ಲಿ ಕೈಗೆಟುಕುವ ದರದಲ್ಲಿ ಆಹಾರ ಮತ್ತು ಉಚಿತ ವೈ-ಫೈ ಸೌಲಭ್ಯಕ್ಕಾಗಿ 'ಉಡಾನ್ ಯಾತ್ರಿ ಕೆಫೆ'ಗಳಂತಹ ಉಪಕ್ರಮಗಳನ್ನು ಸೂಚಿಸಲಾಗಿದೆ.

ಹೊಸ ಮಾರ್ಗಸೂಚಿಗಳು ವಿಮಾನಯಾನ ಪದ್ಧತಿಗಳಲ್ಲಿ ಏಕರೂಪತೆ ತರಲು ಹಾಗೂ ಪ್ರಯಾಣಿಕರ ಮೇಲಿನ ಹೆಚ್ಚುವರಿ ಶುಲ್ಕಗಳ ಭಾರವನ್ನು ಕಡಿಮೆ ಮಾಡಲು ಕೈಗೊಂಡ ಕ್ರಮವೆಂದು ಪರಿಗಣಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries