ಕಾಸರಗೋಡು: ಶನಿವಾರ ನಸುಕಿಗೆ ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದು, ಏಕಾಏಕಿ ಸುರಿದ ಬೇಸಿಗೆ ಮಳೆ ಕುಂಬಳೆ, ಬದಿಯಡ್ಕ, ಮುಳ್ಳೇರಿಯ ಸೇರಿದಂತೆ ವಿವಿಧೆಡೆ ನೀರು ತುಂಬಿಕೊಂಡು ಸಮಸ್ಯೆಗೂ ಕಾರಣವಾಯಿತು.
ಕುಂಬಳೆ-ಬದಿಯಡ್ಕ-ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆ ನಿರ್ಮಾಣ ಸಂದರ್ಭ ಕೆಲವೊಂದು ಅವ್ಯವಸ್ಥೆಯಿಂದ ರಸ್ತೆ ಅಂಚಿಗೆ ನೀರು ತುಂಬಿಕೊಳ್ಳಲು ಕಾರಣವಾಘಿದ್ದು, ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುವ ಸಾಧ್ಯತೆಯಿರುವುದಾಗಿ ಸ್ಥಳೀಯ ನಿವಾಸಿಗಳು ಆತಂಕ ವಯಕ್ತಪಡಿಸಿದ್ದಾರೆ. ಕುಂಬಳೆ ಪೇಟೆಯಲ್ಲಿ ಬಸ್ ನಿಲುಗಡೆ ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದ ಹಿನ್ನೆಲೆಯಲ್ಲಿ ಬಸ್‍ಗಳನ್ನು ನಿಲ್ದಾಣದಿಂದ ದೂರ ನಿಲ್ಲಿಸಬೇಕಾಗಿ ಬಂದಿತ್ತು. ಬೆಳಗಿನ ಜಾವ ಸುರಿದ ಮಳೆಗೆ ಕೆಲವೆಡೆ ಕೃಷಿಕರಿಗೆ ಒಣಗಿದ ಅಡಕೆ ಸಂಗ್ರಹಿಸಿ ಒಳಗೆ ದಾಸ್ತಾನಿರಿಸುವುದೂ ಸಮಸ್ಯೆಯಗಿ ಪರಿಣಮಿಸಿತ್ತು. ಶನಿವಾರ ಹಗಲು ಹೊತ್ತಿನಲ್ಲೂ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣದೊಂದಿಗೆ ಉಷ್ಣಾಂಶವೂ ಏರಿಕೆಯಾಗಿತ್ತು.



