ವಾರಾಣಸಿ: ಕಾಶಿ ವಿಶ್ವನಾಥ ದೇಗುಲದ ಸುತ್ತಲೂ ಧರ್ಮ ಮತ್ತು ಸಂಸ್ಕೃತಿ ಸಮನ್ವಯದೊಂದಿಗೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿದೆ. ಭಕ್ತರಿಗೆ ಸೌಕರ್ಯ ಮತ್ತು ನಗರದ ಸಂಪರ್ಕವನ್ನು ಸುಧಾರಿಸುವ ದೃಷ್ಟಿಯಿಂದ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಇಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ದೇಗುಲದ ಕಾರ್ಯ ನಿರ್ವಹಣಾಧಿಕಾರಿ ವಿಶ್ವ ಭೂಷಣ್ ಮಿಶ್ರಾ, ದೇಗುಲದ ಸುತ್ತಮುತ್ತ ಹಲವು ದೊಡ್ಡ ಮಟ್ಟದ ಯೋಜನೆಗಳು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ರೋಪ್-ಕಾರ್ ಯೋಜನೆ: ವಾರಾಣಸಿ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಕಾಶಿ ವಿಶ್ವನಾಥ ದೇಗುಲವನ್ನು ಸಂಪರ್ಕಿಸುವ ದೇಶದ ಮೊದಲ ನಗರ ರೋಪ್-ಕಾರ್ ಸೇವೆಯನ್ನು ಶೀಘ್ರ ಪ್ರಾರಂಭಿಸಲು ಯೋಜಿಸಲಾಗಿದೆ. ಸುಮಾರು ₹800 ಕೋಟಿ ವೆಚ್ಚದ ಈ ಯೋಜನೆಯು 4 ಕಿ.ಮೀ. ಉದ್ದವಿರಲಿದ್ದು, ಪ್ರಯಾಣದ ಸಮಯ 15-20 ನಿಮಿಷ ಗಳಾಗಿರುತ್ತದೆ. ಇದರಲ್ಲಿ 148 ಕ್ಯಾಬಿನ್‌ಗಳು ಇರಲಿದ್ದು, ದಿನಕ್ಕೆ ಸುಮಾರು 1 ಲಕ್ಷ ಭಕ್ತರು ಪ್ರಯಾಣಿಸಬಹುದಾಗಿದೆ ಎಂದರು.
ದಾಲ್ ಮಂಡಿ ರಸ್ತೆ ವಿಸ್ತರಣೆ: ದೇಗುಲದ ಗೇಟ್ ನಂಬರ್ 4ಕ್ಕೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 250 ಮೀಟರ್ ಉದ್ದದ ದಾಲ್ ಮಂಡಿ ರಸ್ತೆ ವಿಸ್ತರಣೆಗಾಗಿ ₹224 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದರು.
ಘಾಟ್ ಅಭಿವೃದ್ಧಿ: ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್ ಗಳ ನವೀಕರಣ ಕಾಮಗಾರಿಯನ್ನು ಚುರುಕುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಘಾಟ್ ಗಳು ಮತ್ತು ದೇವಾಲಯಗಳ ಸಮೀಪ ಐತಿಹಾಸಿಕ ಪರಂಪರೆಯನ್ನು ಕಾಪಾಡುವಂತೆ ಸೂಚಿಸಲಾಗಿದೆ ಎಂದರು.
ಭಕ್ತರಿಗೆ ಉತ್ತಮ ಅನುಭವ ನೀಡುವ ನಿಟ್ಟಿನಲ್ಲೂ ಹಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಕಾರಿಡಾರ್ ನಲ್ಲಿ ಇರುವ ಅಂಗಡಿಗಳಿಗೆ ಭಕ್ತರು ಸುಲಭವಾಗಿ ಪ್ರವೇಶಿಸುವಂತಾಗಬೇಕು ಮತ್ತು ಅಲ್ಲಿ ಮಾರಾಟವಾಗುವ ವಸ್ತುಗಳ ಬೆಲೆ ನಿಯಂತ್ರಿತವಾಗಿರ ಬೇಕು ಎಂದು ಆದೇಶಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೂ ಒತ್ತು: ದೇಗುಲದ ಟ್ರಸ್ಟ್ ವತಿಯಿಂದ ಸಂಸ್ಕೃತ ಪಾಠ ಶಾಲೆಗಳನ್ನು ತೆರೆಯಲಾಗಿದೆ. ಗೋ ಶಾಲೆಗಳನ್ನು ನಿರ್ವಹಿಸಲಾಗುತ್ತಿದೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ ಇರುವ ರೋಗಿಗಳಿಗೆ ಪ್ರತಿದಿನ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಬಡವರ ಶ್ರಯೋಭಿವೃದ್ಧಿಗೂ ಹಲವು ಸಾಮಾಜಿಕ ಉಪ ಕ್ರಮಗಳು ಜಾರಿಯಲ್ಲಿವೆ ಎಂದರು.
ದೇಗುಲವು ವಿಶಾಲವಾದ ಸಂಕೀರ್ಣ ಹೊಂದಿದೆ. ದೇಶದ ಉತ್ತರ ಮತ್ತು ದಕ್ಷಿಣವನ್ನು ಬೆಸೆಯುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಸಾಂಸ್ಕೃತಿಕ ಅನನ್ಯತೆಯನ್ನು ಎತ್ತಿ ಹಿಡಿಯಲಾಗಿದೆ ಎಂದು ಅಭಿಪ್ರಾಯಪಟ್ಟರು.
ನೂತನ ತಂತ್ರಜ್ಞಾನ ಅಳವಡಿಕೆಯೊಂದಿಗೆ 300 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆ ಇದೆ ಎಂದರು.

