ಮುಂಬೈ: ಮಹಾರಾಷ್ಟ್ರದ ಆಹಾರ ಸಚಿವ ನರಹರಿ ಜಿರವಾಲ್ ಅವರು ತಮ್ಮ ಗೃಹ ಕಚೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದುದಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ, ಸಚಿವ ಹಾಗೂ ಎನ್‌ಸಿಪಿ(ಅಜಿತ್ ಪವಾರ್) ನಾಯಕ ಜಿರವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದೆ.
'ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯೊಂದಿಗಿನ ಜಿರವಾಲ್ ಅವರ ವರ್ತನೆ ಅಶ್ಲೀಲ ಹಾಗೂ ಅನೈತಿಕ. ಇದು ಮಹಾರಾಷ್ಟ್ರ ರಾಜಕಾರಣ ನೈತಿಕವಾಗಿ ಅಧೋಗತಿಗೆ ಇಳಿದಿರುವುದನ್ನು ತೋರಿಸುತ್ತದೆ' ಎಂದು ಕಾಂಗ್ರೆಸ್ ನಾಯಕ ವಿಜಯ ವಡೆಟ್ಟಿವಾರ್ ಟೀಕಿಸಿದ್ದಾರೆ.
'ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜಿರವಾಲ್ ಅವರ ಈ ಖಾಸಗಿ ಕ್ಷಣಗಳನ್ನು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯ ಸಹೋದರನೇ ಚಿತ್ರೀಕರಿಸಿದ್ದು, ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ ಎನ್ನಲಾಗಿದೆ' ಎಂದಿದ್ದಾರೆ.
ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಹರ್ಷವರ್ಧನ ಸಕ್ಪಾಲ್, ಎಎಪಿ ಮುಂಬೈ ಘಟಕದ ಅಧ್ಯಕ್ಷೆ ಪ್ರೀತಿ ಶರ್ಮ ಮೆನನ್, ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಹಾಗೂ ಇತರರು ಕೂಡ ವಿಡಿಯೊ ವಿಚಾರ ಮುಂದಿಟ್ಟುಕೊಂಡು ಜಿರವಾಲ್ ಅವರನ್ನು ಟೀಕಿಸಿದ್ದಾರೆ.

