ತಿರುವನಂತಪುರಂ: 'ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೂಕ್ತ ಪ್ರಾತಿನಿಧ್ಯ ನೀಡಲು ನಿರಾಕರಿಸುತ್ತಿವೆ' ಎಂದು ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಹೇಳಿದ್ದಾರೆ.
ಕಂಪನಿ ಕಾಯ್ದೆ ಅಡಿಯಲ್ಲಿ ಶಾಸನಬದ್ಧ ಅವಶ್ಯಕತೆಗಳನ್ನು ಪಾಲಿಸದ ಕಾರಣಕ್ಕಾಗಿ ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ವೆಲ್ಲಪಲ್ಲಿ ನಟೇಶನ್ ಸೇರಿದಂತೆ, ಎಲ್ಲ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಅನರ್ಹಗೊಳಿಸಿದ ಕೇರಳ ಹೈಕೋರ್ಟ್ ತೀರ್ಪನ್ನು ಈ ವೇಳೆ ಸ್ವಾಗತಿಸಿದ್ದಾರೆ.
ಕೇರಳದ ವರ್ಕಳದಲ್ಲಿರುವ ಶಿವಗಿರಿ ಮಠವು ಈಳವ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಹಿಂದುಳಿದ ವರ್ಗದ ಸಮುದಾಯಗಳಲ್ಲಿ ಪ್ರಾಬಲ್ಯ ಹೊಂದಿದೆ.
ಮುಂದಿನ ತಿಂಗಳು ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿಯೇ ಸ್ವಾಮೀಜಿಯವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಶ್ರೀ ನಾರಾಯಣ ಧರ್ಮ ಸಂಘ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದ್ದಾರೆ.
'ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ದೊರಕುತ್ತಿಲ್ಲ ಎಂದು ಹಲವರು ನನ್ನ ಬಳಿ ದೂರು ಹೇಳಿದ್ದಾರೆ. ಹೀಗಾಗಿ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮಠವು ನಿರ್ಧರಿಸಿದೆ' ಎಂದರು.
'ಶ್ರೀ ನಾರಾಯಣ ಸಮುದಾಯದಿಂದ ಕೇರಳದಲ್ಲಿ ಒಬ್ಬರೇ ಶಾಸಕರಿದ್ದಾರೆ. ಕೇರಳದಲ್ಲಿ ಮೊದಲ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಈಳವ ಸಮುದಾಯದ ಆರ್.ಶಂಕರ್ ಅವರು ಮುಖ್ಯಮಂತ್ರಿಯಾಗಿದ್ದರು' ಎಂದು ವಿವರಿಸಿದ್ದಾರೆ.
'ಕಾಂಗ್ರೆಸ್ ಪಕ್ಷ ಮಾತ್ರವಲ್ಲದೇ, ಎಲ್ಲಾ ರಾಜಕೀಯ ಪಕ್ಷಗಳು ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ವಿಫಲವಾಗಿವೆ' ಎಂದು ಹೇಳಿದ್ದಾರೆ.
'ಕೆ.ಕರುಣಾಕರನ್ ಅವರಿಂದ ಆರಂಭವಾಗಿ ಎ.ಕೆ. ಆಯಂಟನಿ ಅವರು ಇರುವವರೆಗೂ ಎಲ್ಲ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ನೀಡಲಾಗುತ್ತಿತ್ತು. ಆದಾದ ಬಳಿಕ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಕೂಡ ಹಿಂದುಳಿದ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲಿಲ್ಲ' ಎಂದು ದೂರಿದ್ದಾರೆ.
'ಕೇರಳದಲ್ಲಿ ಈಳವ, ಧೀವರ, ವಿಶ್ವಕರ್ಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳವರೇ ಬಹುಸಂಖ್ಯಾತರಿದ್ದಾರೆ. ಈ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿಪಿಎಂ ನಾಯಕರಿಗೆ ಮನವಿ ಮಾಡಲಾಗಿದೆ' ಎಂದು ಅವರು ಹೇಳಿದ್ದಾರೆ.
ಸ್ವಾಮೀಜಿ ಹೇಳಿದ್ದೇನು?
ಸೂಕ್ತ ಪ್ರಾತಿನಿಧ್ಯ ಸಿಗುವವರೆಗೂ ಧ್ವನಿ ಎತ್ತಲಿದ್ದೇವೆ
ಹಿಂದುಳಿದ ವರ್ಗಗಳ ಜನರಿಗೆ ಆರ್ಥಿಕ ಮೀಸಲಾತಿ ಅಗತ್ಯ
ಎಸ್‌ಎನ್‌ಡಿಪಿ ತನ್ನ ಹಿಂದಿನ ಸಾಧನೆಗಳಿಂದ ಹಿಂದೆ ಸರಿದಿದೆ
ಸುಧಾರಣಾ ಚಳವಳಿಗೆ ಉತ್ತಮ ಆಡಳಿತ ಮಂಡಳಿ ಅಗತ್ಯವಾಗಿದೆ

