ಕೊಟ್ಟಾಯಂ: 'ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ 2018ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಲು ಬಿಜೆಪಿಯೇ ಕಾರಣ. ಎಲ್‌ಡಿಎಫ್ ಸರ್ಕಾರದ ಪ್ರಸ್ತುತ ನಿಲುವು 2007ರಲ್ಲಿ ಸಲ್ಲಿಸಿದ ಪ್ರಮಾಣಪತ್ರದ ವಿಚಾರಕ್ಕೆ ಬದ್ಧವಾಗಿರಲಿದೆ' ಎಂದು ಕೇರಳದ ದೇವಸ್ವಂ ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ.
'ಈ ವಿಷಯವನ್ನು ಧಾರ್ಮಿಕ ವಿಚಾರಗಳ ಪರಿಣತರೇ ನಿರ್ಧರಿಸಬೇಕು ಎಂದು 2007ರಲ್ಲಿಯೇ ನಾವು ಪ್ರಮಾಣಪತ್ರವನ್ನು ಸಲ್ಲಿಸಿದ್ದೆವು. ಈ ವಿಚಾರಕ್ಕೆ ಈಗಲೂ ನಾವು ಬದ್ಧರಾಗಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
'ಋತುಸ್ರಾವ ಆಗುವ ವಯಸ್ಸಿನ ಮಹಿಳೆಯರಿಗೆ ಕೂಡ ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ನ 9 ಸದಸ್ಯರ ಪೀಠವು 2018ರ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿತ್ತು. ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಳಿಕವೇ ನ್ಯಾಯಾಲಯದಿಂದ ಈ ತೀರ್ಪು ಬಂದಿದೆ' ಎಂದು ವಾಸವನ್ ಹೇಳಿದ್ದಾರೆ.
'ಮಹಿಳೆಯರ ಪ್ರವೇಶಾತಿ ಕುರಿತಂತೆ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಕೇಳಿಲ್ಲ, ಸಾಂವಿಧಾನಿಕ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವೊಂದು ಸ್ಪಷ್ಟನೆಗಳನ್ನು ಮಾತ್ರ ಕೋರಿದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ನ್ಯಾಯಾಲಯವು ಕೋರಿದ ವಿವರಣೆಗೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಹಾಗೂ ಸಂವಿಧಾನ ತಜ್ಞರೇ ಉತ್ತರ ನೀಡಲಿದ್ದಾರೆ. ಅದರಂತೆ ಅವರು ನೋಡಿಕೊಳ್ಳಲಿದ್ದಾರೆ' ಎಂದು ಸಚಿವರು ವಿವರಿಸಿದ್ದಾರೆ.
'ಒಂದೊಮ್ಮೆ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೋರಿದರೆ, ಈ ವಿಷಯದ ಕುರಿತು ಸರ್ಕಾರದ ಅಭಿಪ್ರಾಯವನ್ನು ಮಂಡಿಸಲಾಗುವುದು. 2007ರಲ್ಲಿ ಸಲ್ಲಿಸಿದ ಪ್ರಮಾಣಪತ್ರಕ್ಕೆ ಸರ್ಕಾರ ಬದ್ಧವಾಗಿರಲಿದೆ. ಸರ್ಕಾರದ ನಿಲುವಿಗೆ ಸಿಪಿಎಂ ಕೂಡ ಬದ್ಧವಾಗಿದೆ. ನಾವು ಯಾವತ್ತಿಗೂ ಭಕ್ತರ ಜೊತೆಗೆ ನಿಲ್ಲಲಿದ್ದೇವೆ' ಎಂದು ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ.
ವಿರೋಧ ಪಕ್ಷಗಳೇ ಕಾರಣ: 'ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ವಿವಿಧ ಸಮಸ್ಯೆಗಳಿಗೆ ಪ್ರತಿಕೂಲವಾದ ತೀರ್ಪುಗಳು ಬಂದಿವೆ. ಹಲವು ವಿಷಯಗಳಲ್ಲಿ ವಿರೋಧ ಪಕ್ಷಗಳಿಗೆ ನ್ಯಾಯಾಲಯದಲ್ಲಿ ಹಿನ್ನಡೆ ಉಂಟಾಗಿದೆ' ಎಂದು ಹೇಳಿದ್ದಾರೆ.
ದೇವಸ್ವಂ ವಿರೋಧ: ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದನ್ನು ವಿರೋಧಿಸಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿತ್ತು.
'ದೇವಾಲಯಗಳು, ಅದರ ನಂಬಿಕೆ ಹಾಗೂ ಪದ್ಧತಿಗಳನ್ನು ರಕ್ಷಿಸಲು ಮಂಡಳಿಯು ಬದ್ಧವಾಗಿದೆ' ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ಈ ಹಿಂದೆ ಸ್ಪಷ್ಟಪಡಿಸಿದ್ದರು.

