ನವದೆಹಲಿ/ಜೋಧಪುರ : ಪರಿಸರ ಹೋರಾಟಗಾರ ಸೊನಂ ವಾಂಗ್ಚೂಕ್ ಅವರ ಬಂಧನದ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ. ಇದರ ಬೆನ್ನಲ್ಲೇ ಜೋಧಪುರ ಕೇಂದ್ರ ಕಾರಾಗೃಹದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ಸೊನಂ ಅವರ ಬಂಧನವನ್ನು ಪ್ರಶ್ನಿಸಿ ಪತ್ನಿ ಗೀತಾಂಜಲಿ ಜೆ. ಆಂಗ್ಮೊ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 17ಕ್ಕೆ ಮುಂದೂಡಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಕೇಂದ್ರವು ಈ ನಿರ್ಧಾರ ಕೈಗೊಂಡಿದೆ.
ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದು ನಾಲ್ವರು ಮೃತಪಟ್ಟ ನಂತರ ಅವರನ್ನು ಬಂಧಿಸಿ, ಜೋಧಪುರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಲಡಾಖ್‌ನಲ್ಲಿ 'ಶಾಂತಿ ಕಾಪಾಡುವ ಉದ್ದೇಶದಿಂದ ಬಂಧನವನ್ನು ರದ್ದು ಮಾಡಲಾಗಿದೆ' ಎಂದು ಕೇಂದ್ರ ಹೇಳಿದೆ. ಅದಾಗ್ಯೂ, ಅವರ ವಿರುದ್ಧದ ಪ್ರಕರಣವನ್ನು ಕೈಬಿಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಅವರನ್ನು ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಜೈಲಿನಿಂದ ಬಿಡುಗಡೆ ಮಾಡಲಾಯಿತು ಎಂದು ರತನದಾ ಪೊಲೀಸ್ ಠಾಣೆಯ ಠಾಣಾಧಿಕಾರಿ ದಿನೇಶ್ ಲಖಾವತ್ ತಿಳಿಸಿದ್ದಾರೆ. ಈ ವೇಳೆ ಸೊನಂ ಅವರ ಪತ್ನಿ ಗೀತಾಂಜಲಿ ಅವರು ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಜೋಧಪುರದಲ್ಲಿದ್ದರು.
ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಲೇಹ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಬಂಧಿಸಲಾಗಿದೆ ಎಂದು ಸೊನಂ ಅವರ ಬಂಧನವನ್ನು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು. ಎನ್‌ಎಸ್‌ಎ ಕಠಿಣ ಕಾಯ್ದೆಯಾಗಿದ್ದು, ಇದರ ಅಡಿಯಲ್ಲಿ ಶಂಕಿತನನ್ನು ಔಪಚಾರಿಕ ಆರೋಪ ಹೊರಿಸದೆ 12 ತಿಂಗಳವರೆಗೆ ಬಂಧನದಲ್ಲಿ ಇಡಬಹುದಾಗಿದೆ.
ಲಡಾಖ್‌ನಲ್ಲಿ ಸ್ಥಳೀಯ ಶಾಲಾ ಶಿಕ್ಷಣವನ್ನು ಸುಧಾರಿಸಲು ಮಾಡಿದ ಕೆಲಸಗಳಿಗಾಗಿ ಸೊನಂ ಅವರಿಗೆ 2018ರಲ್ಲಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ಜೀವನವನ್ನು ಸ್ಫೂರ್ತಿಯಾಗಿಟ್ಟುಕೊಂಡು ಹಿಂದಿ ಭಾಷೆಯಲ್ಲಿ 'ತ್ರೀ ಈಡಿಯಟ್ಸ್' ಚಿತ್ರ ನಿರ್ಮಿಸಲಾಗಿತ್ತು. ಚಿತ್ರದಲ್ಲಿ ಬಾಲಿವುಡ್ ತಾರೆ ಆಮಿರ್ ಖಾನ್ ಅವರು ಸೊನಂ ಅವರ ಪಾತ್ರವನ್ನು ನಿರ್ವಹಿಸಿದ್ದರು.ಮೆಹಬೂಬಾ ಮುಫ್ತಿ ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ
ಮೆಹಬೂಬಾ ಮುಫ್ತಿ (ಪಿಟಿಐ ಚಿತ್ರ)ಮೆಹಬೂಬಾ ಮುಫ್ತಿ ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಅದೃಷ್ಟವಶಾತ್ ಸೊನಂ ಅವರಿಗೆ ತಮ್ಮ ಹಕ್ಕು ಸಿಕ್ಕಿದೆ. ಆದರೆ ಯುಎಪಿಎ ಅಡಿಯಲ್ಲಿ ಇನ್ನೂ ಅನೇಕರು ವಿಚಾರಣೆಯಿಲ್ಲದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ವಿನಯ್ ಕುಮಾರ್ ಸಕ್ಸೇನಾ (ಪಿಟಿಐ ಚಿತ್ರ)ಸೊನಂ ಅವರ ಬಂಧನದ ರದ್ದತಿಯನ್ನು ಲಡಾಖ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಶನಿವಾರ ಸ್ವಾಗತಿಸಿದ್ದು ಈ ನಿರ್ಧಾರವು ಒಂದು ಸಕಾರಾತ್ಮಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ. 'ಆದರೆ ಪ್ರದೇಶದಲ್ಲಿ ಚಳವಳಿ ಮತ್ತು ಹಿಂಸಾಚಾರಕ್ಕೆ ಅವಕಾಶ ಇಲ್ಲ' ಎಂದು ಅವರು ಹೇಳಿದ್ದು 'ಜನರ ಆಕಾಂಕ್ಷೆ ಮತ್ತು ಕಳವಳವನ್ನು ಸಂವಾದದ ಮೂಲಕ ಪರಿಹರಿಸಲಾಗುವುದು' ಎಂದು ತಿಳಿಸಿದ್ದಾರೆ.ಚಳವಳಿಗೆ ಅವಕಾಶವಿಲ್ಲ: ಲಡಾಖ್ ಲೆಫ್ಟಿನೆಂಟ್ ಗವರ್ನರ್ಫೆಬ್ರುವರಿ 4ರಂದು ನಡೆದ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಸಂಘಟನೆಗಳು ಸೊನಂ ಅವರ ಬಿಡುಗಡೆಗಾಗಿ ಒತ್ತಾಯಿಸಿದ್ದವು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿತ್ತು. ಈ ಸಂಘಟನೆಗಳು ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ ಆರನೇ ಪರಿಚ್ಛೇದದ ಅಡಿ ಅದಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಹೋರಾಟ ಮುನ್ನಡೆಸುತ್ತಿವೆ. ಅಲ್ಲದೆ ಗೃಹ ಸಚಿವಾಲಯದೊಂದಿಗೆ ಉನ್ನತ ಮಟ್ಟದ ಮಾತುಕತೆಗಳಲ್ಲಿ ತೊಡಗಿವೆ.ಬಿಡುಗಡೆಗೆ ಒತ್ತಾಯಿಸಿದ್ದ ಎಲ್‌ಎಬಿ ಕೆಡಿಎ
ಲೇಹ್‌ನಲ್ಲಿ ಎಲ್‌ಎಬಿ ಮತ್ತು ಕೆಡಿಎ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ನಂತರ 2025ರ ಸೆಪ್ಟೆಂಬರ್ 26ರಂದು ಸೊನಂ ಅವರನ್ನು ಬಂಧಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ 22 ಪೊಲೀಸರು ಸೇರಿದಂತೆ 45ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

