ಚೆನ್ನೈ: ಎಲ್‌ಪಿಜಿ ಸಿಲಿಂಡರ್ ಬದಲು ಇಂಡಕ್ಷನ್ ಸ್ಟವ್‌ಗೆ ಬದಲಾಗುವ ರೆಸ್ಟೋರೆಂಟ್‌ಗಳು, ಚಹಾ ಅಂಗಡಿಗಳು, ಆಹಾರ ಪೂರೈಕೆದಾರರು ಮತ್ತು ಆಹಾರ ತಯಾರಿಕಾ ಘಟಕಗಳಿಗೆ ತಮಿಳುನಾಡು ಸರ್ಕಾರ ವಿದ್ಯುತ್ ಬಿಲ್‌ನಲ್ಲಿ ರಿಯಾಯಿತಿ ಘೋಷಿಸಿದೆ.
ಇಂಡಕ್ಷನ್ ಸ್ಟವ್ ಬಳಕೆಗೆ ತಗಲುವ ಹೆಚ್ಚುವರಿ ವಿದ್ಯುತ್‌ನ ಪ್ರತಿ ಯುನಿಟ್‌ಗೆ ₹ 2 ರಿಯಾಯಿತಿ ನೀಡಲು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿನಾಯಿತಿ ತಕ್ಷಣದಿಂದ ಜಾರಿಗೆ ಬರಲಿದೆ.
ವಾಣಿಜ್ಯ ಸಿಲಿಂಡರ್ ಬಳಕೆ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ನಿರ್ಬಂಧ ತೆರವಾಗುವವರೆಗೂ ಈ ಸೌಲಭ್ಯ ಸಿಗಲಿದೆ ಎಂದು ಶನಿವಾರ ನಡೆದ ಸಭೆಯ ನಂತರ ಸ್ಟಾಲಿನ್ ತಿಳಿಸಿದ್ದಾರೆ.
'ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಸ್ಟವ್, ಹೀಟರ್‌ಗಳಂತಹ ವಿದ್ಯುತ್ ಸಲಕರಣೆಗಳನ್ನು ಖರೀದಿಸಲು ಸರ್ಕಾರದಿಂದಲೇ ಸಾಲ ಸೌಲಭ್ಯ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ' ಎಂದು ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜೆ.ರಾಧಾಕೃಷ್ಣನ್ ತಿಳಿಸಿದರು.
ಎಲ್‌ಪಿಜಿ, ಸಿಎನ್‌ಜಿ, ಡೀಸೆಲ್, ಉರುವಲು ತೈಲ ಮತ್ತು ಕಟ್ಟಿಗೆ ಬಳಸಿ ಕಾರ್ಯನಿರ್ವಹಿಸುವ 60,698 ಕಾರ್ಖಾನೆಗಳು ಇವೆ. ಇವು ಅಧಿಕಾರಿಗಳಿಗೆ ಮಾಹಿತಿ ನೀಡಿ ತಾತ್ಕಾಲಿಕವಾಗಿ ಪರ್ಯಾಯ ಇಂಧನ ಬಳಸಲು ಅನುಮತಿಸಲಾಗಿದೆ ಎಂದು ತಿಳಿಸಿದರು.

