ಕಾಸರಗೋಡು: ಜಿಲ್ಲೆ ಸೇರಿದಂತೆ ಕೇರಳಾದ್ಯಂತ ಈದುಲ್ ಫಿತೃ ಹಬ್ಬವನ್ನು ಶುಕ್ರವಾರ ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯ ತಳಂಗರೆ ಮಾಲಿಕ್‍ದೀನಾರ್ ಮಸೀದಿ, ನೆಲ್ಲಿಕುಂಜೆ ಮುಹಿಯುದ್ದೀನ್ ಮಸೀದಿ, ಕಾಞಂಗಾಡು, ಮಂಜೇಶ್ವರ, ಕುಂಬಳೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಸೀದಿ, ಈದ್ಗಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು.
ಕೇರಳ ನದ್ವತುಲ್ ಮುಜಾಹಿದೀನ್ (ಕೆಎನ್‍ಎಂ) ಕಾಸರಗೋಡು ಆಯೋಜಿಸಿದ್ದ ಈದ್ಗಾದಲ್ಲಿ ಈದ್ ಪ್ರಾರ್ಥನೆ ಮತ್ತು ಖುತ್ಬಾವನ್ನು ಪ್ರಮುಖ ವಿದ್ವಾಂಸ ಯೂಸುಫ್ ಮೌಲ್ವಿ ನಡೆಸಿಕೊಟ್ಟರು. ವಿಶ್ವಾಸಿಗಳು ಇಸ್ಲಾಂ ಕಲ್ಪಿಸಿಕೊಟ್ಟ ಶಾಂತಿ ಮತ್ತು ಮಾನವೀಯತೆಯ ಸಂದೇಶವನ್ನು ಎತ್ತಿಹಿಡಿಯಲು ಪಣತೊಡಬೇಕು ಎಂದು ತಿಳಿಸಿದರು. ವಿಶ್ವದ ಜನರಿಗೆ ಮತ್ತು ಜಗತ್ತಿಗೆ ಒಳಿತಾಗಲಿ ಮತ್ತು ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಪ್ರಾಣ ತೆತ್ತವರಿಗೆ ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

