ಲಂಡನ್: ಭಾರತಕ್ಕೆ ಹಸ್ತಾಂತರಿಸದಂತೆ ಕೋರಿ ವಜ್ರ ವ್ಯಾಪಾರಿ ನೀರವ್ ಮೋದಿ ಸಲ್ಲಿಸಿದ್ದ ಮನವಿಯ ಮರುವಿಚಾರಣೆಗೆ ಬ್ರಿಟನ್ ಕೋರ್ಟ್ ನಿರಾಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರವ್ ಅವರು ಹೈಕೋರ್ಟ್ ಆಫ್ ಜಸ್ಟೀಸ್‌ನ ಕಿಂಗ್ಸ್ ಬೆಂಚ್ ಪೀಠದ ಮುಂದೆ ಮನವಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಯಾಗಿ ಅರ್ಜಿಯ ವಿರುದ್ಧ ಕೇಂದ್ರೀಯ ತನಿಖಾ ದಳದ (ಸಿಬಿಐ) ಪರವಾಗಿ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ವಕೀಲರು ಬಲವಾದ ವಾದ ಮಂಡಿಸಿದ್ದರು.
ತನಿಖಾ ಅಧಿಕಾರಿಗಳು ಸೇರಿದಂತೆ ಸಿಬಿಐ ಅಧಿಕಾರಿಗಳ ತಂಡವು ವಿಚಾರಣೆಗಾಗಿ ಲಂಡನ್‌ಗೆ ಪ್ರಯಾಣ ಬೆಳೆಸಿತ್ತು. 'ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ತೀರ್ಪಿನ ಆಧಾರದ ಮೇಲೆ ಅರ್ಜಿಯನ್ನು ಮರು-ವಿಚಾರಣೆಗೆ ಕೋರಲಾಗಿತ್ತು. ಸಿಬಿಐನ ನಿರಂತರ ಮತ್ತು ಸಂಘಟಿತ ಪ್ರಯತ್ನಗಳಿಂದ ಅರ್ಜಿ ತಿರಸ್ಕರಿಸಲಾಗಿದೆ' ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ನೀರವ್ ಅವರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಅರ್ಜಿ ಮತ್ತು ಅದರ ಸುತ್ತಲಿನ ಸಂದರ್ಭಗಳು ಪ್ರಕರಣವನ್ನು ಮರು-ತೆರೆಯಲು ಪೂರಕವಾಗಿಲ್ಲ ಎಂದು ಹೇಳಿರುವುದಾಗಿ ವಕ್ತಾರರು ಹೇಳಿದ್ದಾರೆ.
ಆಗ್ನೇಯ ಲಂಡನ್‌ನ ವಾಂಡ್ಸ್ ವರ್ತ್ ಜೈಲಿನಲ್ಲಿ 2019ರಿಂದ ಬಂಧಿಯಾಗಿರುವ 51 ವರ್ಷದ ಉದ್ಯಮಿಯನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಕಳೆದ ಫೆಬ್ರುವರಯಲ್ಲಿ ನ್ಯಾಯಾಲಯ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ನೀರವ್ ಮೋದಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆರೆಮಿ ಸ್ಟುವರ್ಟ್ ಸ್ಮಿತ್ ಹಾಗೂ ರಾಬರ್ಟ್ ಜೇ ಅವರ ಪೀಠ ತೀರ್ಪು ತಿರಸ್ಕರಿಸಿತ್ತು.

