ಬೆಂಗಳೂರು: ಲೇಖಕ ರಾಮ್‌ಕುಮಾರ್ ಮುಖ್ಯೋಪಾಧ್ಯಾಯ ಅವರ 'ಹರ ಪಾರ್ವತಿ ಕಥಾ' ಬಂಗಾಳಿ ಕಾದಂಬರಿಯು 2025ನೇ ಸಾಲಿನ 'ಸರಸ್ವತಿ ಸಮ್ಮಾನ್' ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಕಾದಂಬರಿಯು ಶಿವ ಮತ್ತು ಪಾರ್ವತಿ ಕುರಿತ ಪೌರಾಣಿಕ ಕಥಾಹಂದರವನ್ನು ಹೊಂದಿದೆ.
ಭಾರತೀಯ ಪ್ರಜೆಗಳು ದೇಶದ ಯಾವುದೇ ಭಾಷೆಯಲ್ಲಿ ಬರೆದ ಶ್ರೇಷ್ಠ ಸಾಹಿತ್ಯ ಕೃತಿಗೆ ಕೆ.ಕೆ.ಬಿರ್ಲಾ ಫೌಂಡೇಷನ್ 1991ರಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು ₹15 ಲಕ್ಷ ನಗದು ಮತ್ತು ಪಾರಿತೋಷಕವನ್ನು ಒಳಗೊಂಡಿದೆ.
ರಾಮ್‌ಕುಮಾರ್ ಮುಖ್ಯೋಪಾಧ್ಯಾಯ ಅವರು ಕೋಲ್ಕತ್ತದಲ್ಲಿ 1956 ಅಕ್ಟೋಬರ್ 5ರಂದು ಜನಿಸಿದರು. ಹೌರಾದ ರಾಮಕೃಷ್ಣ ಮಿಷನ್ ವಿದ್ಯಾಮಂದಿರದಲ್ಲಿ ಪದವಿ ಮತ್ತು ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಮಾಡಿದ್ದಾರೆ.
ಸಾಹಿತ್ಯ ಅಕಾಡೆಮಿಯ ಪೂರ್ವ ಮತ್ತು ಈಶಾನ್ಯ ಪ್ರದೇಶದ ಕಾರ್ಯದರ್ಶಿಯಾಗಿ ಮತ್ತು ವಿಶ್ವಭಾರತಿ ಪ್ರಕಾಶನ ಇಲಾಖೆಯಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬಹುಮುಖಿ ಪ್ರತಿಭೆಯನ್ನು ಹೊಂದಿರುವ ಅವರು ಈವರೆಗೆ 9 ಕಾದಂಬರಿಗಳು, 11 ಕಥಾ ಸಂಗ್ರಹ ಮತ್ತು ನಾಲ್ಕು ಪ್ರಬಂಧ ಸಂಗ್ರಹ ಹೊರತಂದಿದ್ದಾರೆ. ಎರಡು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಅಲ್ಲದೇ, 54 ಭಾಷೆಗಳ ಸುಮಾರು 128 ಜನಪದ ಕಥೆಗಳನ್ನು ಸಂಗ್ರಹಿಸಿದ್ದಾರೆ.
ಬಂಕಿಮಚಂದ್ರ ಪುರಸ್ಕಾರ ಮತ್ತು ಬಾಂಗ್ಲಾ ಅಕಾಡೆಮಿ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

