ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಸಿರ್ಹತ್ ಉತ್ತರ ವಿಧಾನಸಭಾ ಕ್ಷೇತ್ರದ ಬೊರೊ ಗೋಬ್ರಾ ಗ್ರಾಮದ ಬೂತ್ ಸಂಖ್ಯೆ 5ರಲ್ಲಿ ಬಿಎಲ್‌ಒ ಸೇರಿ 340 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪಟ್ಟಿಯಿಂದ ಡಿಲೀಟ್ ಆದವರೆಲ್ಲಾ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ ಎಂದು indiatoday.in ವರದಿ ಮಾಡಿದೆ.
ಇತ್ತೀಚೆಗೆ ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ, ಒಂದೇ ಬೂತ್ ನಿಂದ ಒಟ್ಟು 340 ಮತದಾರರ ಹೆಸರುಗಳನ್ನು ಅಳಿಸಲಾಗಿದ್ದು, ಇದರಿಂದ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ ಕರಡು ಪಟ್ಟಿಯಲ್ಲಿ ಈ ಮತದಾರರ ಹೆಸರುಗಳನ್ನು ಪರಿಶೀಲನೆಯಲ್ಲಿದೆ ಎಂದು ಗುರುತಿಸಲಾಗಿತ್ತು. ಆದರೆ, ನಿನ್ನೆ ಸಂಜೆ 5 ಗಂಟೆಗೆ ಮೊದಲ ಕರಡು ಪಟ್ಟಿಯನ್ನು ಪ್ರಕಟಿಸಿದ ನಂತರ, ಅವರ ಹೆಸರುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ.
ಡಿಲೀಟ್ ಮಾಡುವ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಮೊಹಮ್ಮದ್ ಶಫಿಯುಲ್ ಆಲಂ ಅವರ ಹೆಸರೂ ಸೇರಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಸಾಮೂಹಿಕವಾಗಿ ಹೆಸರುಗಳನ್ನು ತೆಗೆದುಹಾಕಿರುವುದನ್ನು ಖಂಡಿಸಿ, ನೂರಕ್ಕೂ ಹೆಚ್ಚು ಸ್ಥಳೀಯರು ಅಧಿಕಾರಿಯ ನಿವಾಸ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿ, ಸಮುದಾಯ ಆಧಾರಿತವಾಗಿ ಡಿಲೀಟ್ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲವೆಂದು ಸಂತ್ರಸ್ತರು ಹಾಗೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸಿರ್ಹತ್ ಬ್ಲಾಕ್ II ರ ಬ್ಲಾಕ್ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಲಂ ತಿಳಿಸಿದ್ದಾರೆ. ಚುನಾವಣಾ ನೋಂದಣಿ ಅಧಿಕಾರಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.
ಅಳಿಸಲಾದ ಮತದಾರರಲ್ಲಿ ಒಬ್ಬರಾದ ಕಾಝೀರುಲ್ ಮೊಂಡಲ್, ಚುನಾವಣಾ ಆಯೋಗ ಒಂದು ಮಾನ್ಯ ದಾಖಲೆ ಸಾಕು ಎಂದು ಹೇಳಿದ್ದರೂ, ಹಲವರು ಮೂರು ಅಥವಾ ನಾಲ್ಕು ದಾಖಲೆಗಳನ್ನು ಸಲ್ಲಿಸಿದ್ದರೂ ಸಹ ಅವರ ಹೆಸರುಗಳನ್ನು ಅಳಿಸಲಾಗಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜಕೀಯ ಒತ್ತಡದಲ್ಲಿ ಆಯೋಗ ಕಾರ್ಯನಿರ್ವಹಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ವಿಚಾರವಾಗಿ ಕಾನೂನು ಹೋರಾಟ ಮುಂದುವರಿಸುವುದಾಗಿ ಮೊಹಮ್ಮದ್ ಶಫಿಯುಲ್ ಆಲಂ ತಿಳಿಸಿದ್ದಾರೆ.
ಒಟ್ಟು 992 ನೋಂದಾಯಿತ ಮತದಾರರನ್ನು ಹೊಂದಿರುವ ಬಸಿರ್ಹತ್ ಬ್ಲಾಕ್ II ರ ಬೇಗಂಪುರ ಬಿಬಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 5 ಈ ವಿವಾದದ ಕೇಂದ್ರವಾಗಿದೆ. ಇದರಲ್ಲಿನ 38 ಹೆಸರುಗಳನ್ನು ಮೃತಪಟ್ಟವರು ಅಥವಾ ಬೇರೆ ಪ್ರದೇಶಕ್ಕೆ ಸ್ಥಳಾಂತರವಾದವರು ಎಂಬ ಆಧಾರದ ಮೇಲೆ ತೆಗೆದುಹಾಕಲಾಗಿದ್ದರೆ, ಉಳಿದ 358 ಮತದಾರರನ್ನು ಅರ್ಹತೆ ಪರಿಶೀಲನೆಗಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಇದಲ್ಲದೆ, 18 ಪ್ರಕರಣಗಳನ್ನು ಕರಡು ಪಟ್ಟಿಯಲ್ಲೇ ಸರಿಪಡಿಸಲಾಗಿದ್ದು, ಉಳಿದ 340 ಪ್ರಕರಣಗಳನ್ನು ಮಾರ್ಚ್ 23ರಂದು ಪ್ರಕಟವಾದ ಕರಡು ಪಟ್ಟಿಯವರೆಗೆ ಪರಿಶೀಲನೆ ಮಾಡಲಾಗಿತ್ತು. ಆದರೆ, ಆ ದಿನವೇ ಎಲ್ಲಾ 340 ಹೆಸರುಗಳನ್ನು ಡಿಲೀಟ್ ಮಾಡಲಾದ ವರ್ಗಕ್ಕೆ ಸೇರಿಸಲಾಗಿದೆ.
ಈ ಮತದಾರರಿಗೆ ತಮ್ಮ ಅರ್ಜಿ ನಮೂನೆಗಳನ್ನು ಭರ್ತಿ ಮಾಡುವಲ್ಲಿ ವೈಯಕ್ತಿಕವಾಗಿ ಸಹಾಯ ಮಾಡಿದ್ದು, ಚುನಾವಣಾ ಆಯೋಗದ ನಿಯಮಾನುಸಾರ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಂಡಿದ್ದೇನೆ. ಆದರೂ, ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆಲಂ ಆರೋಪಿಸಿದ್ದಾರೆ.

