ನವದೆಹಲಿ: ಬೆಂಗಳೂರಿನ ಎಚ್‌ಎಎಲ್, ಜಕ್ಕೂರು ವಾಯುನೆಲೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಕಟ್ಟಡ ಎತ್ತರದ ಮಿತಿಯಿಂದ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿದ್ದು, ಈ ಮಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಮಾಡಲಾಗಿದೆ' ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
'ಹೈದರಾಬಾದ್, ಮುಂಬೈ ಸೇರಿದಂತೆ ಬೇರೆ ಕಡೆಗಳಲ್ಲಿ ಮಿತಿ ಕಡಿಮೆ ಇದೆ. ಬೇರೆ ನಗರಗಳಲ್ಲಿ ಇರುವಂತೆ ಬೆಂಗಳೂರಿನಲ್ಲೂ ಎತ್ತರದ ಮಿತಿ ಇರಬೇಕು ಎಂದು ಮನವಿ ಮಾಡಿದ್ದೇವೆ. ಈ ಕಟ್ಟಡ ಎತ್ತರದ ಮಿತಿಯಿಂದಾಗಿ ಬೆಂಗಳೂರಿನಲ್ಲಿ ನಾಗರಿಕರು ಪ್ರೀಮಿಯಂ ಎಫ್‌ಎಆರ್ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ಹಣ ಬರುತ್ತಿಲ್ಲ. ಎಫ್‌ಎಆರ್ ಕಡಿಮೆ ಮಾಡಿ ಪ್ರೀಮಿಯಂ ಎಫ್‌ಐಆರ್ ಹೆಚ್ಚಿಸಿ ಎಂದು ಕೇಂದ್ರ ಸರ್ಕಾರವೇ ಸೂಚನೆ ನೀಡಿದೆ. ಹೀಗಾಗಿ ನಾವು ಅನೇಕ ತೀರ್ಮಾನಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿರುವೆ' ಎಂದರು.
ಈ ವಿಷಯದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ನಾನು ಕೂಡ ರಕ್ಷಣಾ ಸಚಿವರನ್ನು ಭೇಟಿ ಮಾಡಿ ನಮ್ಮ ಈ ಸಮಸ್ಯೆಗಳನ್ನು ವಿವರಿಸುತ್ತೇನೆ ಎಂದರು.
ಸರ್ಕಾರಕ್ಕೆ ಸಹಕಾರ ನೀಡದ ನೈಸ್ ಸಂಸ್ಥೆಗೆ ತಕ್ಕ ಉತ್ತರ
'ಬೆಂಗಳೂರಿನಲ್ಲಿ ಸ್ಕೈಡೆಕ್ ನಿರ್ಮಿಸಲು ಎರಡೂವರೆ ವರ್ಷಗಳಿಂದ ಪ್ರಯತ್ನಪಟ್ಟರೂ ಸೂಕ್ತ ಜಾಗ ಸಿಕ್ಕಿರಲಿಲ್ಲ. ಈಗ ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಿಸಲು ಮುಂದಾಗಿದ್ದೇವೆ. ವಿಮಾನ ನಿಲ್ದಾಣ ಸುತ್ತಮುತ್ತ 20 ಕಿ.ಮೀ ದೂರದಲ್ಲಿ ಸ್ಕೈಡೆಕ್ ನಿರ್ಮಿಸಲು ಸಾಧ್ಯವಿಲ್ಲ. ಎನ್‌ಜಿಎಫ್ ಬಳಿ ಸ್ಕೈಡೆಕ್ ಮಾಡಲು ಜಾಗ ಉತ್ತಮವಾಗಿತ್ತು. ಮೆಟ್ರೊ ಸೌಲಭ್ಯವಿತ್ತು. ನೈಸ್ ರಸ್ತೆ ಬಳಿ ಸೋಂಪುರ ವೃತ್ತದ ಬಳಿ ನಿರ್ಮಾಣಕ್ಕೆ ಅನೇಕರು ಸಲಹೆ ನೀಡಿದ್ದರು. ಆದರೆ, ನೈಸ್ ಸಂಸ್ಥೆಯವರು ಸಹಕಾರ ನೀಡಲಿಲ್ಲ. ಸರ್ಕಾರಕ್ಕೆ ಸಹಕಾರ ನೀಡದ ಅವರಿಗೆ ತಕ್ಕ ಉತ್ತರ ನೀಡುತ್ತೇವೆ' ಎಂದು ಎಚ್ಚರಿಸಿದರು.
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ವಿಚಾರದಲ್ಲಿ ಕೇಂದ್ರ ಸರ್ಕಾರ ಅಭಿಪ್ರಾಯ ನೀಡಿದೆ. ರಾಜ್ಯ ಸರ್ಕಾರವೇ ಜಾಗ ಅಂತಿಮಗೊಳಿಸುವಂತೆಯೂ ಸಲಹೆ ನೀಡಿದೆ. ನಮ್ಮ ಬಳಿ 2-3 ಆಯ್ಕೆಗಳಿದ್ದು, ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.

