ನವದೆಹಲಿ: 'ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ನಿಲ್ಲಿಸುವ ಅಗತ್ಯವಿದೆ' ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಹೇಳಿದ್ದಾರೆ.
ಬೆಂಗಳೂರು ಮೂಲದ ಸಂಶೋಧನಾ ಸಂಸ್ಥೆ 'ಸಿನರ್ಜಿಯಾ' ಗುರುವಾರ ಇಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, 'ಈ ಯುದ್ಧದಿಂದಾಗಿ ತೈಲ ಬೆಲೆ ಗಗನಮುಖಿಯಾಗಿದ್ದು, ಜಗತ್ತಿನ ಬಹುತೇಕ ದೇಶಗಳು ಅಸಹನೀಯ ಬೆಲೆ ತೆರುತ್ತಿವೆ' ಎಂದು ತಿಳಿಸಿದ್ದಾರೆ.
'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ದಾಳಿ ನಡೆಸುವ ಮೂಲಕ ದೊಡ್ಡ ತಪ್ಪು ಮಾಡಿದ್ದಾರೆ. ಇಸ್ರೇಲ್ ಸಹ ಇದರಲ್ಲಿ ಭಾಗಿಯಾಗಿದೆ' ಎಂದಿದ್ದಾರೆ.
'ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರನ್ನು ಹತ್ಯೆ ಮಾಡಿದ್ದು, ಅಲ್ಲಿನ ಜನರನ್ನು ದುರ್ಬಲಗೊಳಿಸುವ ಬದಲು, ಅವರೊಳಗಿದ್ದ ಹೋರಾಟದ ಕಿಚ್ಚಿಗೆ ಇಂಧನ ಸುರಿದಂತಾಗಿದೆ' ಎಂದು ಹೇಳಿದ್ದಾರೆ.
'ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸುವುದರಲ್ಲಿ ತೈಲ, ಅನಿಲ ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲೂ ತೈಲ ಪ್ರಮುಖವಾದುದು. ತೈಲದ ಸರಬರಾಜಿಗೆ ಅಡ್ಡಿ ಆದರೆ, ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ತಲ್ಲಣಕ್ಕೀಡಾಗಲಿವೆ. ಈಗಾಗಲೇ ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ' ಎಂದಿದ್ದಾರೆ.
'ಕೆಲವು ದೇಶಗಳು ಮೀಸಲು ತೈಲವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಆದರೆ, ಇದರಿಂದ ಸಿಗುವ ಪರಿಹಾರ ತಾತ್ಕಾಲಿಕವಾದುದು' ಎಂದು ಅವರು ಹೇಳಿದರು.

