ಢಾಕಾ: ಪ್ರಧಾನಿ ತಾರಿಕ್ ರೆಹಮಾನ್ ಅವರ ನೇತೃತ್ವದ ಬಿಎನ್‌ಪಿ ಪರ ಒಲವು ತೋರುತ್ತಿದ್ದ ಉಸ್ತುವಾರಿಯನ್ನು ಬದಲಿಸಿ, 2007ರಲ್ಲಿ ಸೇನಾ ಬೆಂಬಲಿತ ಮಧ್ಯಂತರ ಸರ್ಕಾರವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಅವರನ್ನು ಬಂಧಿಸಲಾಗಿದೆ. ಮಸೂದ್ ಉದ್ದೀನ್ ಚೌಧುರಿ ಬಂಧಿತರು.
ಚೌಧುರಿ ಅವರ ವಿರುದ್ಧ ದಾಖಲಾಗಿರುವ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಪತ್ತೇದಾರಿ ವಿಭಾಗವು ಅವರನ್ನು ಸೋಮವಾರ ರಾತ್ರಿ ಬಂಧಿಸಿದೆ ಎಂದು ವಿಭಾಗದ ಮುಖ್ಯಸ್ಥ ಶಫಿಕುಲ್ ಇಸಾಮ್ ಅವರು ಮಂಗಳವಾರ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸೇನೆಯ ಹುದ್ದೆಯಿಂದ ನಿವೃತ್ತರಾದ ಮಸೂದ್ ಅವರು ಆಸ್ಟ್ರೇಲಿಯಾದಲ್ಲಿ ಬಾಂಗ್ಲಾದೇಶದ ರಾಯಭಾರಿ ಆಗಿದ್ದರು. ನಂತರ ಜಾತೀಯ ಪಕ್ಷದಿಂದ ಸಂಸತ್ ಸದಸ್ಯರಾಗಿ ಆಯ್ಕೆ ಆಗಿದ್ದರು. ಜಾತೀಯ ಪಕ್ಷವು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್‌ನ ಮಿತ್ರಪಕ್ಷ.
ಸೇನಾ ಬೆಂಬಲಿತ ಮಧ್ಯಂತರ ಸರ್ಕಾರವು 2007ರಲ್ಲಿ ಅಸ್ತಿತ್ವಕ್ಕೆ ಬಂದು 2008ರವರೆಗೂ ಆಳ್ವಿಕೆ ನಡೆಸಿತು. ಈ ಅವಧಿಯಲ್ಲಿ ಹಾಲಿ ಪ್ರಧಾನಿ ರೆಹಮಾನ್ ಅವರನ್ನು ಬಂಧಿಸಿ, ಚಿತ್ರಹಿಂಸೆ ನೀಡಲಾಗಿತ್ತು. ಕ್ರಿಮಿನಲ್ ಆರೋಪವನ್ನೂ ಹೊರಿಸಲಾಗಿತ್ತು. ಆಗ, ಗಂಭೀರ ಅಪರಾಧಗಳ ರಾಷ್ಟ್ರೀಯ ಸಮನ್ವಯ ಸಮಿತಿಯ ಸಂಯೋಜಕರಾಗಿದ್ದ ಚೌಧುರಿ ಅವರು, ರೆಹಮಾನ್ ಗಡಿಪಾರಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡು ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 17 ವರ್ಷದಿಂದ ಗಡಿಪಾರು ಶಿಕ್ಷೆ ಅನುಭವಿಸುತ್ತಿದ್ದ ರೆಹಮಾನ್ ಅವರಿಗೆ ಸ್ವದೇಶಕ್ಕೆ ಮರಳಲು ಅನುಮತಿ ನೀಡಲಾಗಿತ್ತು. ಇದೇ ಸರ್ಕಾರವು ಚೌಧರಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

