ನವದೆಹಲಿ: ಗುಜರಾತ್‌ನ ಕಛ್‌ನ ಹುಲ್ಲಗಾವಲು ಪ್ರದೇಶದಲ್ಲಿ ದಶಕದ ಬಳಿಕ ಹೆಬ್ಬಕ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಮರಿವೊಂದು ಜನಿಸಿದೆ. ಇದು, ಈ ಪ್ರಭೇದದ ಪಕ್ಷಿಗಳ ಸಂತತಿ ಹೆಚ್ಚಳದ ಭರವಸೆ ಮೂಡಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕಛ್‌ನಲ್ಲಿ ಕೇವಲ ಮೂರು ಹೆಣ್ಣು ಹೆಬ್ಬಕಗಳು ಉಳಿದಿವೆ.
ಹೆಣ್ಣು ಹೆಬ್ಬಕವೊಂದು ಕಳೆದ ವರ್ಷ ಆಗಸ್ಟ್‌ನಲ್ಲಿ ಫಲವತ್ತಲ್ಲದ ಮೊಟ್ಟೆ ಹಾಕಿತ್ತು. ಇದನ್ನು ರಾಜಸ್ಥಾನದಲ್ಲಿರುವ ಸಂತಾನೋತ್ಪತ್ತಿ ಕೇಂದ್ರಕ್ಕೆ ಕಳುಹಿಸಿ, ಕೃತಕವಾಗಿ ಕಾವು ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಭಾರತೀಯ ವನ್ಯಜೀವಿ ಸಂಸ್ಥೆ(ಡಬ್ಲುಐಐ) ವಿಜ್ಞಾನಿಗಳು ಈ ಮೊಟ್ಟೆಯನ್ಜು 770 ಕಿ.ಮೀ. ದೂರ ಕ್ರಮಿಸಿ, ಕಛ್‌ನಲ್ಲಿರುವ ಹೆಬ್ಬಕಗಳ ಆವಾಸಸ್ಥಾನಕ್ಕೆ ಯಶಸ್ವಿಯಾಗಿ ತಂದಿದ್ದರು ಎಂದು ಕೇಂದ್ರ ಪರಿಸರ ಸಚಿವಾಲಯ ಶನಿವಾರ ತಿಳಿಸಿದೆ.
ಇನ್‌ಕ್ಯುಬೇಟರ್‌ನಲ್ಲಿದ್ದ ಈ ಮೊಟ್ಟೆಯನ್ನು ಮಾರ್ಚ್ 22ರಂದು ಹೆಬ್ಬಕದ ಗೂಡಿನೊಳಗೆ ಇರಿಸಲಾಗಿತ್ತು. ಹೆಬ್ಬಕವು ಕಾವು ಕೊಟ್ಟು, ಮಾರ್ಚ್ 26ರಂದು ಮರಿ ಜನಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ತಜ್ಞರ ತಂಡವೊಂದು ಮರಿಯ ಬೆಳವಣಿಗೆ ಮೇಲೆ ನಿಗಾ ವಹಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
'ಅಳಿವಿನಂಚಿನಲ್ಲಿರುವ ಹೆಬ್ಬಕಗಳ ಸಂರಕ್ಷಣೆಯಲ್ಲಿ ಈ ಸಾಧನೆ ಮಹತ್ವದ್ದಾಗಿದೆ' ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ.

