ತನ್ನ ಶತಾಬ್ದಿಯ ಪ್ರಯುಕ್ತ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರಿ ಆಯೋಜಿಸಿದ್ದ 'ಕರ್ಟೇನ್ ರೇಸರ್ ಆಫ್ ಫಿಕ್ಕಿ @100' ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಸಚಿವಾಲಯವು ಎಂಇಎ ಅಭಿಪ್ರಾಯವನ್ನು ಕೋರಿತ್ತು ಎನ್ನಲಾಗಿದೆ.
ಕಾರ್ಯಕ್ರಮವನ್ನು ಫೆ.19ರಂದು ನಿಗದಿಗೊಳಿಸಲಾಗಿತ್ತು ಮತ್ತು ಅದೇ ದಿನ ದಿಲ್ಲಿಯಲ್ಲಿ ಜಾಗತಿಕ ಎಐ ಶೃಂಗಸಭೆ ಆರಂಭಗೊಂಡಿತ್ತು.
ಈ ಹಂತದಲ್ಲಿ ವಾಣಿಜ್ಯ ಸಚಿವರು ಗೇಟ್ಸ್ ಅವರನ್ನು ಭೇಟಿಯಾಗುವುದು ಅಥವಾ ಕಾರ್ಯಕ್ರಮದಲ್ಲಿ ಜಂಟಿಯಾಗಿ ಭಾಗವಹಿಸುವುದು ರಾಜಕೀಯ ದೃಷ್ಟಿಯಿಂದ ಸೂಕ್ತವಲ್ಲ ಎನ್ನುವುದು ವಿದೇಶಾಂಗ ಸಚಿವಾಲಯದ ಅಭಿಪ್ರಾಯವಾಗಿದೆ ಎಂದು ಎಂಇಎದ ಎಎಂಎಸ್(ಅಮೆರಿಕಾಸ್) ವಿಭಾಗದ ಹಿರಿಯ ಅಧಿಕಾರಿಯೋರ್ವರು ವಾಣಿಜ್ಯ ಸಚಿವಾಲಯಕ್ಕೆ ತಿಳಿಸಿದ್ದರು.
ಎಎಂಎಸ್ ವಿಭಾಗವು ಅಮೆರಿಕ ಮತ್ತು ಕೆನಡಾ ಸೇರಿದಂತೆ ಉತ್ತರ,ಮಧ್ಯ ಮತ್ತು ದಕ್ಷಿಣ ಅಮೆರಿಕಾದ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ನಿರ್ವಹಿಸುತ್ತದೆ.
ವಿದೇಶಾಂಗ ಸಚಿವಾಲಯದಿಂದ ಸಂದೇಶ ರವಾನೆಯ ಬಳಿಕ ಫಿಕ್ಕಿ ಕಾರ್ಯಕ್ರಮವನ್ನು ಮುಂದೂಡಲಾಯಿತು ಎಂದು ಮೂಲಗಳು ತಿಳಿಸಿವೆ.
ಫೆ.16ರಂದು ಭಾರತಕ್ಕೆ ಆಗಮಿಸಿದ್ದ ಗೇಟ್ಸ್ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು,ಉಪ ಮುಖ್ಯಮಂತ್ರಿ ಪವನ ಕಲ್ಯಾಣ ಮತ್ತು ಹಿರಿಯ ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಫೆ.19ರಂದು ಅವರು ಇಂಡಿಯಾ ಎಐ ಇಂಪ್ಯಾಕ್ಟ್ ಸಭೆಯಲ್ಲಿ ಪ್ರಮುಖ ಭಾಷಣವನ್ನು ಮಾಡಬೇಕಿತ್ತು, ಆದರೆ ಗಂಟೆಗಳ ಮುನ್ನ ಅವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರು.
ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ಮತ್ತು ಎಐ ಶೃಂಗಸಭೆಯ ಪ್ರಮುಖ ಆದ್ಯತೆಗಳ ಮೇಲೆ ಗಮನ ಇರುವಂತೆ ನೋಡಿಕೊಳ್ಳಲು ಗೇಟ್ಸ್ ಭಾಷಣವನ್ನು ಮಾಡುವುದಿಲ್ಲ. ಗೇಟ್ಸ್ ಫೌಂಡೇಷನ್ ಅನ್ನು ಆಫ್ರಿಕಾ ಮತ್ತು ಭಾರತ ಕಚೇರಿಗಳ ಅಧ್ಯಕ್ಷ ಅಂಕುರ ವೋರಾ ಅವರು ಪ್ರತಿನಿಧಿಸಲಿದ್ದಾರೆ ಎಂದು ಗೇಟ್ಸ್ ಫೌಂಡೇಷನ್ ಫೆ.19ರಂದು ಹೇಳಿಕೆಯಲ್ಲಿ ತಿಳಿಸಿತ್ತು.
'ನಾವು ಹಂಚಿಕೊಂಡಿರುವ ಆರೋಗ್ಯ ಮತ್ತು ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ಭಾರತದಲ್ಲಿ ನಮ್ಮ ಕೆಲಸಕ್ಕೆ ಗೇಟ್ಸ್ ಫೌಂಡೇಷನ್ ಸಂಪೂರ್ಣವಾಗಿ ಬದ್ಧವಾಗಿದೆ' ಎಂದೂ ಅದು ಹೇಳಿತ್ತು.
ಇದಕ್ಕೂ ಮುನ್ನ,ಎಪ್‌ಸ್ಟೀನ್ ಫೈಲ್‌ಗಳಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಮಾಹಿತಿಗಳ ಪರಿಶೀಲನೆಯನ್ನು ತಾನು ಮಂದುವರಿಸುವುದಾಗಿ ಗೇಟ್ಸ್ ಫೌಂಡೇಷನ್ ತಿಳಿಸಿತ್ತು.
ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿಗಾಗಿ ಗಣನೀಯ ಪ್ರಮಾಣದಲ್ಲಿ ಲೋಕೋಪಕಾರಿ ಸಂಪನ್ಮೂಲಗಳನ್ನು ತಾನು ಕ್ರೋಡೀಕರಿಸಬಲ್ಲೆ ಎಂಬ ಎಪ್‌ಸ್ಟೀನ್ ಹೇಳಿಕೆಯ ಆಧಾರದಲ್ಲಿ ಫೌಂಡೇಷನ್‌ನ ಕೆಲವು ಉದ್ಯೋಗಿಗಳು ಈ ಸಂಭಾವ್ಯ ನಿಧಿಯನ್ನು ಪಡೆಯಲು ಎಪ್‌ಸ್ಟೀನ್ ಜೊತೆ ಮಾತುಕತೆ ನಡೆಸಿದ್ದರು. ಅಂತಿಮವಾಗಿ ಫೌಂಡೇಷನ್ ಎಪ್‌ಸ್ಟೇನ್ ಜೊತೆ ಯಾವುದೇ ಸಹಯೋಗಕ್ಕೆ ಮುಂದಾಗಿರಲಿಲ್ಲ ಮತ್ತು ಯಾವುದೇ ನಿಧಿಯನ್ನು ಎಂದೂ ರಚಿಸಿರಲಾಗಿರಲಿಲ್ಲ. ಯಾವುದೇ ಸಮಯದಲ್ಲಿಯೂ ಫೌಂಡೇಷನ್ ಎಪ್‌ಸ್ಟೀನ್‌ಗೆ ಹಣವನ್ನು ಪಾವತಿಸಿರಲಿಲ್ಲ ಮತ್ತು ಆತನನ್ನು ನೇಮಿಸಿಕೊಂಡಿರಲಿಲ್ಲ ಎಂದು ಗೇಟ್ಸ್ ಫೌಂಡೇಷನ್ ಫೆ.11ರಂದು ಹೇಳಿಕೆಯಲ್ಲಿ ತಿಳಿಸಿತ್ತು.
ಮಹಿಳೆಯರು ಮತ್ತು ಬಾಲಕಿಯರ ಮೇಲೆ ಎಪ್‌ಸ್ಟೀನ್ ದೌರ್ಜನ್ಯ ಭಯಾನಕವಾಗಿತ್ತು ಮತ್ತು ಅವರು ಅನುಭವಿಸಿದ್ದನ್ನು ಯಾರೂ ಎಂದಿಗೂ ಅನುಭವಿಸಬಾರದು ಎಂದೂ ಅದು ಹೇಳಿತ್ತು.

