ತನ್ನ ಹೆಚ್ಚಿನ ಅನಿಲ ಅಗತ್ಯಗಳಿಗಾಗಿ ಖತರ್‌ನೊಂದಿಗಿನ ದೀರ್ಘಾವಧಿಯ ಎಲ್‌ಎನ್‌ಜಿ ಒಪ್ಪಂದಗಳನ್ನು ಅಲವಂಬಿಸಿರುವ ಭಾರತಕ್ಕೆ ಅನಿಲ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಹಲವಾರು ಕೈಗಾರಿಕಾ ಬಳಕೆದಾರರು ಮತ್ತು ನಗರ ಅನಿಲ ವಿತರಣೆ (ಸಿಜಿಡಿ) ಕಂಪನಿಗಳಿಗೆ ಪೂರೈಕೆ ಶೇ.40ರಷ್ಟು ಕಡಿತಗೊಂಡಿದೆ.
ಕೆಲವು ಕೈಗಾರಿಕಾ ಬಳಕೆದಾರರು ಪರ್ಯಾಯ, ಆದರೆ ದುಬಾರಿ ವ್ಯವಸ್ಥೆಗಳತ್ತ ಮುಖ ಮಾಡಬಹುದಾದರೂ ಸಿಎನ್‌ಜಿ-ಚಿಲ್ಲರೆ ನಗರ ಅನಿಲ ವಲಯವು ತೀವ್ರ ಒತ್ತಡದ ಎಚ್ಚರಿಕೆ ನೀಡಿದೆ. ಖತರ್ ಒಪ್ಪಂದಗಳಿಗಿಂತ ದುಪ್ಪಟ್ಟು ದರದಲ್ಲಿ ಸ್ಪಾಟ್ ಎನ್‌ಎನ್‌ಜಿಯನ್ನು ಖರೀದಿಸುವುದರಿಂದ ಸಿಎನ್‌ಜಿಯ ಬೆಲೆ ಪ್ರಯೋಜನವನ್ನು ಕಳೆದುಕೊಳ್ಳಬಹುದು ಮತ್ತು ಗ್ರಾಹಕರು ಶಾಶ್ವತವಾಗಿ ವಿದ್ಯುತ್ ವಾಹನಗಳಿಗೆ ಬದಲಾಗಬಹುದು ಎಂದು ಸಿಜಿಡಿ ನಿರ್ವಾಹಕರು ಕಳವಳ ವ್ಯಕ್ತಪಡಿಸಿದ್ದಾರೆ.
ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದರಿಂದ ಭಾರತದ ಅತಿ ದೊಡ್ಡ ಎಲ್‌ಎನ್‌ಜಿ ಆಮದುದಾರನಾಗಿರುವ ಪೆಟ್ರೋನೆಟ್ ಎಲ್‌ಎನ್‌ಜಿ ಲಿ.ಗೆ ಖತರ್‌ನಿಂದ ಎಲ್‌ಎನ್‌ಜಿ ಸಾಗಿಸಲು ಹಡಗುಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಖತರ್ ಸೇರಿದಂತೆ ಹೆಚ್ಚಿನ ಪಶ್ಚಿಮ ಏಶ್ಯಾ ದೇಶಗಳು ಹಾರ್ಮುಝ್ ಮೂಲಕವೇ ತಮ್ಮ ಹೆಚ್ಚಿನ ತೈಲ ಮತ್ತು ಅನಿಲ ರಫ್ತನ್ನು ನಡೆಸುತ್ತವೆ.
ಹೆಚ್ಚುವರಿಯಾಗಿ ಇರಾನ್‌ನಿಂದ ಡ್ರೋನ್ ದಾಳಿಯ ಬಳಿಕ ಖತರ್ ವಿಶ್ವದ ಅತ್ಯಂತ ದೊಡ್ಡ ರಫ್ತು ಸ್ಥಾವರದಲ್ಲಿ ಎನ್‌ಎನ್‌ಜಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಇದು ಭಾರತಕ್ಕೂ ಅನಿಲವನ್ನು ಪೂರೈಸುತ್ತಿತ್ತು.
ಭಾರತವು ವಾರ್ಷಿಕವಾಗಿ ಆಮದು ಮಾಡಿಕೊಳ್ಳುವ 27 ಮಿಲಿಯನ್ ಟನ್ ಎಲ್‌ಎನ್‌ಜಿಯ ಪೈಕಿ ಶೇ.40ರಷ್ಟನ್ನು ಖತರ್ ಪೂರೈಸುತ್ತದೆ.
ಪೂರೈಕೆ ಕಡಿತಗಳು ನಗರ ಅನಿಲ ಸಂಸ್ಥೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿವೆ. ವಾಹನಗಳಿಗೆ ಸಿಎನ್‌ಜಿ ಮತ್ತು ಕೊಳವೆಗಳ ಮೂಲಕ ಮನೆಗಳಿಗೆ ಅಡಿಗೆ ಅನಿಲ ಅಗತ್ಯಗಳನ್ನು ಪೂರೈಸಲು ದೇಶೀಯ ಅನಿಲ ಮತ್ತು ಎಲ್‌ಎನ್‌ಜಿ ಲಭ್ಯತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ಅವು ಮಾ.3ರಂದು ಸರಕಾರಿ ಸ್ವಾಮ್ಯದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾಕ್ಕೆ (ಗೈಲ್) ಪತ್ರ ಬರೆದಿವೆ.

