ಬೈರುತ್: ಲೆಬನಾನ್ ನ ರಾಜಧಾನಿ ಬೈರುತ್ ದಕ್ಷಿಣ ಉಪನಗರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ರಾತ್ರೋರಾತ್ರಿ ವಾಯುದಾಳಿಯಲ್ಲಿ ಫೆಲೆಸ್ತೀನಿನ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಸಶಸ್ತ್ರ ಘಟಕವಾದ ಅಲ್-ಕುಡ್ಸ್ ಬ್ರಿಗೇಡ್ಸ್ ಹಿರಿಯ ಕಮಾಂಡರ್ ಹತ್ಯೆಯಾಗಿದ್ದಾರೆ ಎಂದು ಸಂಘಟನೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಸಂಘಟನೆಯ ಸಶಸ್ತ್ರ ಘಟಕವಾದ ಅಲ್-ಕುಡ್ಸ್ ಬ್ರಿಗೇಡ್ಸ್ ಹೊರಡಿಸಿದ ಪ್ರಕಟನೆಯಲ್ಲಿ, ಮೃತರನ್ನು 41 ವರ್ಷದ ಅದಮ್ ಅಲ್-ಒಥ್ಮನ್ ಎಂದು ಗುರುತಿಸಲಾಗಿದೆ. ಅವರನ್ನು ಲೆಬನಾನ್ ನಲ್ಲಿನ ಅಲ್-ಕುಡ್ಸ್ ಬ್ರಿಗೇಡ್ ಗಳ ಕಮಾಂಡರ್ ಎಂದು ಕರೆಯಲಾಗುತ್ತಿತ್ತು. ದಾಳಿ ನಡೆದ ವೇಳೆ ಅವರು ಬೈರುತ್ ನ ದಕ್ಷಿಣ ಉಪನಗರ ಪ್ರದೇಶದಲ್ಲಿದ್ದರು ಎನ್ನಲಾಗಿದೆ.
ಲೆಬನಾನ್ ನಲ್ಲಿರುವ ಹೆಜ್ಬೊಲ್ಲಾ ಸಂಘಟನೆಗೆ ಸೇರಿದ 70 ಕ್ಕೂ ಹೆಚ್ಚು ನೆಲೆಗಳನ್ನು ಹೊಡೆದಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಹೆಜ್ಬೊಲ್ಲಾ ರಾತ್ರಿಯಿಡೀ ಉತ್ತರ ಇಸ್ರೇಲ್ ಭಾಗಗಳ ಮೇಲೆ ರಾಕೆಟ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಈ ಪ್ರತಿದಾಳಿ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಇಸ್ರೇಲ್-ಲೆಬನಾನ್ ಸಂಘರ್ಷ ಮತ್ತಷ್ಟು ವಿಸ್ತಾರಗೊಳ್ಳುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.

