ನವದೆಹಲಿ: ಕಳೆದ ವಾರ ಹೋರಾಟಗಾರರನ್ನು ಯಾವ ಸನ್ನಿವೇಶದಲ್ಲಿ ಹಾಗೂ ಯಾವ ಕಾನೂನುಬದ್ಧ ಅಧಿಕಾರದಡಿ ಬಂಧಿಸಲಾಗಿದೆ ಎಂಬುದನ್ನು ವಿವರಿಸಿ ಪ್ರಮಾಣಪತ್ರ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ಭಾನುವಾರ ದಿಲ್ಲಿ ಹೈಕೋರ್ಟ್ ಸೂಚಿಸಿದೆ.
ಭಾನುವಾರ ನಡೆದ ವಿಶೇಷ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಹಾಗೂ ರವೀಂದರ್ ದುಡೇಜಾರನ್ನೊಳಗೊಂಡ ನ್ಯಾಯಪೀಠ, ಹೋರಾಟಗಾರರನ್ನು ಕರೆದೊಯ್ಯುವ ಸಂದರ್ಭದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು.
ವಿಶೇಷ ಘಟಕ ಕಚೇರಿಯ ಸಿಸಿಟಿವಿ ದೃಶ್ಯಾವಳಿ ಕುರಿತು ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು ಎಂದು ಹೇಳಿದ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿತು.
ಬಂಧಿತರನ್ನೆಲ್ಲ ಬಿಡುಗಡೆ ಮಾಡಲಾಗಿದೆ ಎಂದು ದಿಲ್ಲಿ ಪೊಲೀಸರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣ ಅಷ್ಟು ಸರಳವಾಗಿಲ್ಲ ಎಂದು ಹೇಳಿ, ಎಫ್‌ಐಆರ್ ಗೋಪ್ಯವಾಗಿರುತ್ತದೆ ಎಂಬ ವಾದವನ್ನೂ ಮಂಡಿಸಿದರು.
ಬಂಧಿತರ ಪೈಕಿ ಒಬ್ಬರು ಇನ್ನೂ ಬಿಡುಗಡೆಯಾಗಿಲ್ಲ ಎಂಬ ಆರೋಪದ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯ ಮಾರ್ಚ್ 27ಕ್ಕೆ ಪಟ್ಟಿ ಮಾಡಿತು. ಆದರೆ, ಎಲ್ಲ ಹೋರಾಟಗಾರರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಪುನರುಚ್ಚರಿಸಿದರು.
ಈ ವೇಳೆ, "ನೀವು ಅವರನ್ನು ಪತ್ತೆಹಚ್ಚಬೇಕು" ಎಂದು ನ್ಯಾಯಪೀಠ ದಿಲ್ಲಿ ಪೊಲೀಸರಿಗೆ ಸೂಚಿಸಿತು.
ದಯಾಳ್ ಸಿಂಗ್ ಕಾಲೇಜು ಮತ್ತು ವಿಜಯನಗರ ಪ್ರದೇಶಗಳಿಂದ ಸುಮಾರು ಹತ್ತು ಮಂದಿ ಹೋರಾಟಗಾರರನ್ನು ಪೊಲೀಸರು ಕರೆದೊಯ್ದಿದ್ದಾರೆ ಎಂದು ವಕೀಲರು ಆರೋಪಿಸಿದರು. ಅರ್ಜಿದಾರರಾದ ಸಾಗರಿಕಾ ರಜೋರಾ ಅವರ ಸಹೋದರಿ ಲಕ್ಷಿತಾ ರಜೋರಾರನ್ನು ಸಾಮಾನ್ಯ ಉಡುಪಿನಲ್ಲೇ ಪೊಲೀಸರು ಕರೆದೊಯ್ದಿದ್ದಾರೆ ಎಂದು ವಕೀಲ ಶಾರೂಖ್ ಅಲಮ್ ದೂರಿದರು.
ಅರ್ಜಿದಾರ ಎಹ್ಸಾನುಲ್ ಹಕ್ ಪರವಾಗಿ ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವ್ಸ್ ಹಾಜರಾಗಿ, "ಪರಿಸ್ಥಿತಿ ಕಳವಳಕಾರಿಯಾಗಿದೆ. ಎಲ್ಲ ಎಫ್‌ಐಆರ್ ಪ್ರತಿಗಳನ್ನು ನಮಗೆ ನೀಡುವಂತೆ ಪೊಲೀಸರಿಗೆ ಸೂಚಿಸಬೇಕು" ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆದರೆ, ಈ ಮನವಿಯನ್ನು ತಳ್ಳಿ ಹಾಕಿದ ಪೊಲೀಸರು, ಎಫ್‌ಐಆರ್ ಗೋಪ್ಯ ಸ್ವರೂಪ ಹೊಂದಿದೆ ಎಂದು ಪ್ರತಿವಾದ ಮಂಡಿಸಿದರು.

