ಮಂಜೇಶ್ವರ: ಪವಿತ್ರ ರಂಝಾನ್‍ನ ವೃತಗಳನ್ನು ಅನುಷ್ಠಾನಗೊಳಿಸಿದ ಮಂಜೇಶ್ವರದ ಮುಸ್ಲಿಮರು ಶುಕ್ರವಾರ ಅತ್ಯಂತ ಸಡಗರ, ಸಂಭ್ರಮದಿಂದ 'ಈದುಲ್ ಫಿತ್ರು' ಆಚರಿಸಿದರು.
ಮಂಜೇಶ್ವರ ತಾಲೂಕಿನಾದ್ಯಂತ ಎಲ್ಲಾ ಜುಮಾ ಮಸೀದಿ, ಈದ್ದಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಯಾ ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವ ಮೂಲಕ ಹಬ್ಬಕ್ಕೆ ಸಂಭ್ರಮದ ಕಳೆ ತಂದರು.
ಶುಕ್ರವಾರ ಮುಂಜಾನೆಯೇ ಹೊಸ ವಸ್ತ್ರ ಧರಿಸಿದ ಮುಸ್ಲಿಂ ಬಾಂಧವರು ಮಂಜೇಶ್ವರದ ಪ್ರಸಿದ್ಧ ಮಸೀದಿಗಳಾದ ಉದ್ಯಾವರ ಜುಮಾ ಮಸೀದಿ, ದಾರುಸ್ಸಲಾಂ ಸಲಫಿ ಮಸೀದಿ, ಕುಂಜತ್ತೂರು ಮಸ್ಜಿದುನ್ನೂರು, ಪೆÇಸೋಟು ಜುಮಾ ಮಸೀದಿ, ಹೊಸಬೆಟ್ಟು, ಹೊಸಂಗಡಿ,ಕುಂಬಳೆ ಸೇರಿದಂತೆ ವಿವಿಧ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿ, ವಿಶ್ವ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಕುಂಜತ್ತೂರು ದಾರುಸ್ಸಲಾಂ ಸಲಫಿ ಮಸೀದಿಯ ಅಧೀನದ ಈದ್ಗಾ ದಲ್ಲಿ ನಡೆದ ಈದ್ ನಮಾಜ್ ಗೆ ಮೊಹಮ್ಮದಲಿ ಸಲಫಿ ನೇತೃತ್ವ ನೀಡಿ ಖುತ್ಬಾ ನಿರ್ವಹಿಸಿದರು. ಈ ಹಬ್ಬವು ಕೇವಲ ಆಚರಣೆಯಲ್ಲ, ಇದು ತಾಳ್ಮೆ, ದಾನ ಮತ್ತು ಮಾನವೀಯತೆಯ ಸಂದೇಶವನ್ನು ಸಾರುವ ಪವಿತ್ರ ದಿನವಾಗಿದೆ," ಎಂದು ಈ ಸಂದರ್ಭದಲ್ಲಿ ಅವರು ಹಿತವಚನ ನೀಡಿದರು.
ಪ್ರಾರ್ಥನೆಯ ನಂತರ ಪರಸ್ಪರ ಆಲಿಂಗಿಸಿಕೊಳ್ಳುವ ಮೂಲಕ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ದೃಶ್ಯಗಳು ಎಲ್ಲೆಡೆ ಕಂಡುಬಂದವು. ಜಾತಿ-ಧರ್ಮದ ಭೇದವಿಲ್ಲದೆ ಗೆಳೆಯರು, ಹಿತೈಷಿಗಳು ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಶುಭ ಹಾರೈಸಿದರು.
ಹಬ್ಬದ ಅಂಗವಾಗಿ ಬಡವರಿಗೆ 'ಫಿತರ್ ಝಕಾತ್' ಹೆಸರಿನಲ್ಲಿ ದಾನವನ್ನು ವಿತರಿಸಲಾಯಿತು.
ಮನೆ ಮನೆಗಳಲ್ಲಿ ವಿಶೇಷವಾಗಿ ತಯಾರಿಸಿದ ಶ್ಯಾವಿಗೆ ಪಾಯಸ ಹಾಗೂ ಬಿರಿಯಾನಿಯ ಘಮಲು ಹಬ್ಬದ ಮೆರುಗನ್ನು ಹೆಚ್ಚಿಸಿತ್ತು. ಹೊಸ ಬಟ್ಟೆ ಧರಿಸಿ, ಹಿರಿಯರಿಂದ 'ಈದಿ' (ಹಣ) ಪಡೆದ ಮಕ್ಕಳ ಸಂಭ್ರಮ ಮುಗಿಲುಮುಟ್ಟಿತ್ತು. ಮಂಜೇಶ್ವರ ಪೇಟೆ ಹಬ್ಬದ ಪ್ರಯುಕ್ತ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ಒಟ್ಟಾರೆಯಾಗಿ ಮಂಜೇಶ್ವರದ ಈದುಲ್ ಫಿತ್ರ್ ಆಚರಣೆಯು ಭಾವೈಕ್ಯತೆ ಮತ್ತು ಪ್ರೀತಿಯ ಸಂಕೇತವಾಗಿ ಮೂಡಿಬಂತು.

.jpg)
.jpg)
