ವಾಷಿಂಗ್ಟನ್: ಇರಾನ್‌ನ ರಾಜಕೀಯ ನಾಯಕತ್ವ ಇನ್ನೂ ಅಖಂಡವಾಗಿದ್ದು, ಸರ್ಕಾರ ಪತನಗೊಳ್ಳುವ ತಕ್ಷಣದ ಅಪಾಯ ಕಾಣಿಸುತ್ತಿಲ್ಲ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಅಂದಾಜಿಸಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ವಿಷಯದ ಬಗ್ಗೆ ತಿಳಿದಿರುವ ಮೂರು ಮೂಲಗಳನ್ನು ಉಲ್ಲೇಖಿಸಿರುವ ವರದಿಯ ಪ್ರಕಾರ, ಇರಾನ್ ನ ಆಡಳಿತ ವ್ಯವಸ್ಥೆ ಇನ್ನೂ ಸ್ಥಿರವಾಗಿದ್ದು, ದೇಶದ ಸಾರ್ವಜನಿಕರ ಮೇಲೆ ಸರ್ಕಾರದ ನಿಯಂತ್ರಣ ಮುಂದುವರಿದಿದೆ ಎಂಬುದನ್ನು ಗುಪ್ತಚರ ವರದಿಗಳು ಸೂಚಿಸುತ್ತಿವೆ.
ಈ ಮೌಲ್ಯಮಾಪನಗಳೊಂದಿಗೆ ಪರಿಚಿತರಾದ ಮೂಲವೊಂದು, "ಬಹುಪಾಲು ಗುಪ್ತಚರ ವರದಿಗಳು ಆಡಳಿತವು ಪತನದ ತಕ್ಷಣದ ಅಪಾಯದಲ್ಲಿಲ್ಲ ಎಂಬುದನ್ನು ಸೂಚಿಸುತ್ತಿವೆ. ಜೊತೆಗೆ ಇರಾನ್ ಸರ್ಕಾರ ಸಾರ್ವಜನಿಕರ ಮೇಲೆ ತನ್ನ ನಿಯಂತ್ರಣವನ್ನು ಇನ್ನೂ ಕಾಯ್ದುಕೊಂಡಿದೆ" ಎಂದು ಹೇಳಿದೆ.
ಮೂಲಗಳ ಪ್ರಕಾರ, ಈ ಇತ್ತೀಚಿನ ಮೌಲ್ಯಮಾಪನವನ್ನು ಕಳೆದ ಕೆಲವು ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ.
ರಾಯಿಟರ್ಸ್ ವರದಿಯ ಪ್ರಕಾರ, ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ದಾಳಿಯ ಮೊದಲ ದಿನವೇ ಇರಾನ್ ನ ಸುಪ್ರೀಂ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆಯಾಗಿದ್ದರೂ ಕೂಡ ದೇಶದ ರಾಜಕೀಯ ನಾಯಕತ್ವದಲ್ಲಿ ಗಮನಾರ್ಹ ಸ್ಥಿತಿಸ್ಥಾಪಕತ್ವ ಕಂಡುಬಂದಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಅಭಿಪ್ರಾಯಪಟ್ಟಿದೆ.
ಇನ್ನೊಂದೆಡೆ, ಯುದ್ಧದಿಂದಲೇ ಇರಾನ್ ಸರ್ಕಾರ ಪತನಗೊಳ್ಳುತ್ತದೆ ಎಂಬುದರಲ್ಲಿ ಖಚಿತತೆ ಇಲ್ಲ ಎಂದು ಇಸ್ರೇಲ್‌ನ ಹಿರಿಯ ಅಧಿಕಾರಿಯೊಬ್ಬರು ಒಪ್ಪಿಕೊಂಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

