"ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಅಮೆರಿಕದ ಮಿಲಿಟರಿ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು. ಇಲ್ಲದಿದ್ದರೆ ಅವುಗಳ ಮೇಲೆ ಭೀಕರ ದಾಳಿ ನಡೆಸಲಾಗುವುದು," ಎಂದು ಮೊಜ್ತಾಬಾ ಖಮೇನಿ ಅಧಿಕಾರ ವಹಿಸಿಕೊಂಡ ನಂತರದ ತಮ್ಮ ಮೊದಲ ಅಧಿಕೃತ ಹೇಳಿಕೆಯಲ್ಲಿ ಗುಡುಗಿದ್ದಾರೆ. ನೆರೆಯ ದೇಶದ ಸ್ನೇಹದ ಮೇಲೆ ನಂಬಿಕೆ ಇದೆ, ಆದ್ರೆ ಹಾರ್ಮುಜ್ ಜಲಸಂಧಿ ಸದ್ಯಕ್ಕೆ ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಭಾನುವಾರ ಇರಾನ್‌ನ ಸರ್ವೋಚ್ಚ ನಾಯಕನಾಗಿ ನೇಮಕಗೊಂಡ ನಂತರ ಮೊಜ್ತಾಬಾ ಖಮೇನಿ ಅವರು ಇಲ್ಲಿಯವರೆಗೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರ ಈ ಮೊದಲ ಸಂದೇಶವನ್ನು ಇರಾನ್ ಸರ್ಕಾರಿ ದೂರದರ್ಶನದಲ್ಲಿ ಓದಿ ಪ್ರಸಾರ ಮಾಡಲಾಗಿದೆ.

ಸಿಎನ್‌ಎನ್ (CNN) ವರದಿಯ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಮೊದಲ ದಿನದ ವೈಮಾನಿಕ ದಾಳಿಯಲ್ಲಿ ಮೊಜ್ತಾಬಾ ಖಮೇನಿ ಅವರ ಕಾಲಿನ ಮೂಳೆ ಮುರಿದಿದ್ದು, ಕೆಲವು ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಕ್ಯಾಮೆರಾ ಮುಂದೆ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಸೈಪ್ರಸ್‌ಗೆ ಇರಾನ್ ರಾಯಭಾರಿಯಾಗಿರುವ ಅಲಿರೆಜಾ ಸಲಾರಿಯನ್ ಅವರು ಗಾರ್ಡಿಯನ್ ಪತ್ರಿಕೆಗೆ ಮಾಹಿತಿ ನೀಡಿದ್ದು, ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಮತ್ತು ಅವರ ಕುಟುಂಬದ ಐವರು ಸದಸ್ಯರನ್ನು ಬಲಿಪಡೆದ ಅದೇ ವೈಮಾನಿಕ ದಾಳಿಯಲ್ಲಿ ಮೊಜ್ತಾಬಾ ಕೂಡ ಗಾಯಗೊಂಡಿದ್ದರು ಎಂದು ದೃಢಪಡಿಸಿದ್ದಾರೆ.

ಮೊಜ್ತಾಬಾ ಖಮೇನಿ ಅವರ ರೆಕಾರ್ಡ್ ಮಾಡಲಾದ ಹೇಳಿಕೆಯನ್ನು ದೇಶದಾದ್ಯಂತ ಬಿತ್ತರಿಸಲಾಗಿದ್ದು, "ಅಮೆರಿಕದ ಮಿಲಿಟರಿ ನೆಲೆಗಳು ಕಾರ್ಯಾಚರಣೆ ಮುಂದುವರಿಸಿದರೆ ಅವುಗಳನ್ನು ನಾಶಪಡಿಸಲಾಗುವುದು" ಎಂಬ ಕಠಿಣ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

