ಪುಣೆ: ಇಸ್ರೇಲ್-ಇರಾನ್ ಸಂಘರ್ಷದಿಂದ ಉಂಟಾದ ಇಂಧನ ಪೂರೈಕೆ ಬಿಕ್ಕಟ್ಟು, ಪುಣೆಯ ಅತಿದೊಡ್ಡ ಸ್ಮಶಾನಗಳಲ್ಲಿ ಒಂದಾದ ವೈಕುಂಠ ಧಾಮದ ಮೇಲೂ ಪರಿಣಾಮ ಬೀರಿದೆ. ಅನಿಲ ಚಿತಾಗಾರದಲ್ಲಿ ಶವಸಂಸ್ಕಾರ ಮಾಡುವುದನ್ನು ಪಾಲಿಕೆಯು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
'ಎಲ್‌ಪಿಜಿಯಲ್ಲಿರುವ ಪ್ರೊಪೇನ್ ಮತ್ತು ಬ್ಯುಟೇನ್ ಅನ್ನು ದೇಶದಲ್ಲಿ ಮಿತವಾಗಿ ಬಳಸಲಾಗುತ್ತದೆ.
ಈಗ ಲಭ್ಯವಿರುವ ಪ್ರೊಪೇನ್ ಮತ್ತು ಬ್ಯೂಟೇನ್ ಅನ್ನು ದೇಶಾದಾದ್ಯಂತ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಗೆ ಆದ್ಯತೆಯ ಮೇರೆಗೆ ಬಳಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಆದೇಶ ಹೊರಡಿಸಿದೆ' ಎಂದು ಪುಣೆ ಮಹಾನಗರ ಪಾಲಿಕೆ ತಿಳಿಸಿದೆ.
ಪುಣೆಯ ನವಿ ಪೇಠ್ ಪ್ರದೇಶದಲ್ಲಿ ಸುಮಾರು 17 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ವೈಕುಂಠ ಧಾಮದಲ್ಲಿ ದಿನಕ್ಕೆ ಸರಾಸರಿ 20 ಶವಗಳನ್ನು ಸಂಸ್ಕಾರ ಮಾಡಲಾಗುತ್ತದೆ.
'ವಿದ್ಯುತ್ ಚಿತಾಗಾರ ಮತ್ತು ಕಟ್ಟಿಗೆ ಆಧಾರಿತ ಚಿತಾಗಾರಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ' ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

