ಬಲರಾಮಪುರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿಯ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಇಲ್ಲಿನ ಮುಸ್ಲಿಂ ಧರ್ಮಗುರುವಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಮಿಶ್ರಾ ನೀಡಿದ ದೂರು ಆಧರಿಸಿ ಮೌಲಾನಾ ಅಬ್ದುಲ್ ಸಲೀಂ ವಿರುದ್ಧ ಕೊಟ್ವಾಲಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
'ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಸಲೀಂ ಅವರು, ಯೋಗಿ ಅವರ ತಾಯಿ ಕುರಿತು ಖಂಡನೀಯ ಹೇಳಿಕೆ ನೀಡಿದ್ದಾರೆ. ಗೋಹತ್ಯೆಗೆ ಸಂಬಂಧಿಸಿದ ಕಾನೂನುಗಳ ವಿರುದ್ಧ ಅಲ್ಪಸಂಖ್ಯಾತ ಸಮುದಾಯದವರನ್ನು ಪ್ರಚೋದಿಸಲೂ ಯತ್ನಿಸಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಲೀಂ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಲರಾಮಪುರ ಹಾಗೂ ಲಖನೌ ಸೇರಿದಂತೆ ರಾಜ್ಯದ ಹಲವೆಡೆ ಅವರ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಾರೆ.

