ತಿರುಚಿರಾಪಳ್ಳಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪಕ್ಷದ 12ನೇ ರಾಜ್ಯ ಸಮಾವೇಶದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿದರು.
ತಿರುಚಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಸಮೀಪದ ಸಿರುಗನೂರಿನಲ್ಲಿ ಸಮಾವೇಶ ನಡೆದಿದ್ದು, 'ಸ್ಟಾಲಿನ್ ಅವರೇ ಮುಂದುವರಿಯಲಿ, ತಮಿಳುನಾಡಿಗೆ ಜಯವಾಗಲಿ' ಧ್ಯೇಯವಾಕ್ಯದಡಿ ಕಾರ್ಯಕ್ರಮ ನಡೆಯಿತು.
'ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರು ರಾಜ್ಯ ಸರ್ಕಾರದ ಸಾಧನೆಗಳನ್ನು ಒತ್ತಿ ಹೇಳುವ ಬದಲಾಗಿ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಘೋಷಣೆಗಳನ್ನು ಹೊರಡಿಸುವ ಸಾಧ್ಯತೆ ಇದೆ' ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.
ಕಾರ್ಯಕ್ರದಲ್ಲಿ ಸ್ಟಾಲಿನ್ ಅವರು 110 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಪಕ್ಷದ ಧ್ವಜವನ್ನು ಹಾರಿಸಿದರು. 2021ರ ಚುನಾವಣೆ ಸಂದರ್ಭದಲ್ಲೂ ಸ್ಟಾಲಿನ್ ಇದೇ ರೀತಿಯ ಸಮಾವೇಶದ ಮೂಲಕ ಪ್ರಚಾರ ಆರಂಭಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಪಕ್ಷದ ಕಾರ್ಯಕರ್ತರಿಗೆ ಪತ್ರ ಬರೆದಿದ್ದ ಸ್ಟಾಲಿನ್ ಅವರು, 'ಸಮಾವೇಶವು ಮಹತ್ವದ ರಾಜಕೀಯ ಕಾರ್ಯಕ್ರಮವಾಗಿದೆ. 2026ರ ವಿಧಾನಸಭಾ ಚುನಾವಣೆಗೆ ಇದು ಮುನ್ನುಡಿಯಾಗಲಿದೆ' ಎಂದು ಹೇಳಿದ್ದರು.

