ನವದೆಹಲಿ: 'ಕೇರಳದ ಜನರು ಬದಲಾವಣೆ ತರಲು ಸನ್ನದ್ಧರಾಗಿದ್ದಾರೆ' ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಯುಡಿಎಫ್ (ಸಂಯುಕ್ತ ಪ್ರಜಾಸತ್ತಾತ್ಮಕ ರಂಗ) ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ತಮ್ಮ 'ಎಕ್ಸ್' ಖಾತೆಯಲ್ಲಿ ' ಟೀಂ ಯುಡಿಎಫ್ ಈಸ್ ಟೀಂ ಕೇರಳಂ' ಎಂದು ಪೋಸ್ಟ್ ಮಾಡಿರುವ ಅವರು, ' ನಮ್ಮ ಪ್ರತಿಯೊಬ್ಬ ಅಭ್ಯರ್ಥಿಯೂ ಕೇರಳದ ಧ್ವನಿ, ಆಕಾಂಕ್ಷೆ ಮತ್ತು ಜನರ ನಂಬಿಕೆಯನ್ನು ಪ್ರತಿಬಿಂಬಿಸಲಿದ್ದಾರೆ' ಎಂದಿದ್ದಾರೆ.
'ಕೇರಳ ನನಗೆ ಮನೆ, ಕೇರಳಿಗರು ನನ್ನ ಕುಟುಂಬ ಇದ್ದಂತೆ. ಅವರು ನನಗೆ ನೀಡಿದ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ಯಾವತ್ತೂ ಅವರ ಪಾಲುದಾರ' ಎಂದಿದ್ದಾರೆ.
'ಯಾರು ತಮ್ಮನ್ನು ಆಲಿಸುತ್ತಾರೊ, ಅರ್ಥಮಾಡಿಕೊಳ್ಳುತ್ತಾರೊ ಮತ್ತು ಪ್ರಾಮಾಣಿಕತೆಯಿಂದ ಸ್ಪಂದಿಸುತ್ತಾರೊ ಅಂಥವರ ಸರ್ಕಾರವನ್ನು ಕೇರಳ ಬಯಸುತ್ತಿದೆ. ಯುಡಿಎಫ್ ಜೊತೆಗೂಡಿ ಭವಿಷ್ಯದ, ಸುಂದರ ರಾಜ್ಯ ಕಟ್ಟಲು ನಾನು ಸಿದ್ಧ' ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 9ರಂದು ನಡೆಯುವ ವಿಧಾನಸಭೆ ಚುನಾವಣೆಗೆ ತಾನು ಸ್ಪರ್ಧಿಸುವ 92 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ನಂತರ ರಾಹುಲ್ ಅವರು ಈ ಪೋಸ್ಟ್ ಮಾಡಿದ್ದಾರೆ.
ಸಂಸದರಿಗೆ ಟಿಕೆಟ್ ಇಲ್ಲ: ಆಡಳಿತಾರೂಢ ಎಲ್‌ಡಿಎಫ್ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಕೆಲ ಸಂಸದರಿಗೂ ಟಿಕೆಟ್ ನೀಡಲಿದೆ ಎಂಬ ಚರ್ಚೆಗಳಿದ್ದವು. ಆದರೆ ಯಾವುದೇ ಸಂಸದರನ್ನು ಕಣಕ್ಕಿಳಿಸಿಲ್ಲ.
ಕೇರಳದಲ್ಲಿ ಕಳೆದ 10 ವರ್ಷಗಳಿಂದಲೂ ಕಾಂಗ್ರೆಸ್ ಮೈತ್ರಿಕೂಟ ವಿಪಕ್ಷ ಸ್ಥಾನದಲ್ಲಿದೆ.

