ಕೋಲ್ಕತ್ತ: ಸರಿಯಾದ ದಾಖಲೆಗಳಿಲ್ಲದೆ ಬಾಂಗ್ಲಾದೇಶದ ಮೂಲಕ ಭಾರತ ಪ್ರವೇಶಿಸಿದ ಆರೋಪದಡಿ ಅಫ್ಗಾನಿಸ್ತಾನದ ಪ್ರಜೆಯನ್ನು ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಅಫ್ಗಾನಿಸ್ತಾನದ ನಿಮ್ರೋಜ್ ನಿವಾಸಿ ಅಲ್ಜಾಹಿ ಮುಸಾಫರ್ ಬಂಧಿತ.
ಫತೇಪುರ್ ಗಡಿ ಪ್ರದೇಶದ ಮೂಲಕ ಭಾರತ- ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿ ದಾಟಲು ಸೋಮವಾರ ರಾತ್ರಿ ಪ್ರಯತ್ನಿಸುತ್ತಿದ್ದಾಗ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಆರೋಪಿಯನ್ನು ವಶಕ್ಕೆ ಪಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಬಳಿ ಯಾವುದೇ ಮಾನ್ಯ ಪ್ರಯಾಣ ದಾಖಲೆಗಳಿರಲಿಲ್ಲ. ಬಿಎಸ್‌ಎಫ್‌ನ ಪ್ರಾಥಮಿಕ ವಿಚಾರಣೆಯ ಬಳಿಕ, ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ನಾದಿಯಾದ ಹನ್ಸ್‌ಖಾಲಿಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿ ಗಡಿ ಪ್ರವೇಶಿಸಿದ ಕಾರಣ ಮತ್ತು ಗಡಿ ಪ್ರವೇಶಕ್ಕೆ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ನಾದಿಯಾದ ರಾಣಾ ಘಾಟ್‌ನಲ್ಲಿರುವ ನ್ಯಾಯಾಲಯವು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಮಂಗಳವಾರ ನೀಡಿದೆ.

