ನವದೆಹಲಿ: ಜನರು ಭೀತಿಗೆ ಒಳಗಾಗಿ ಎಲ್‌ಪಿಜಿ ಸಿಲಿಂಡರ್ ಖರೀದಿಸಲು ಮುಂದಾಗುವ ಅಗತ್ಯವಿಲ್ಲ, ಎಂದಿನಂತೆ ಎರಡೂವರೆ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಸುವ ಕೆಲಸ ನಡೆದಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮ ಹೇಳಿದ್ದಾರೆ.
ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ವ್ಯವಸ್ಥೆಗೆ ಧಕ್ಕೆ ಆಗಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಚ್ಚಾ ತೈಲವನ್ನು ಹೊರ್ಮುಜ್ ಜಲಸಂಧಿ ಬಳಸದ ಮೂಲಗಳಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮವಾಗಿ ಎಲ್‌ಪಿಜಿ ಉತ್ಪಾದನೆಯಲ್ಲಿ ಶೇ 25ರಷ್ಟು ಹೆಚ್ಚಳ ಆಗಿದೆ ಎಂದು ಸಚಿವಾಲಯ ಹೇಳಿದೆ.
'ತಪ್ಪು ಮಾಹಿತಿಯ ಕಾರಣದಿಂದಾಗಿ ಕೆಲವರು ಭೀತಿಗೆ ಒಳಗಾಗಿ ಎಲ್‌ಪಿಜಿ ಸಿಲಿಂಡರ್ ಖರೀದಿಗೆ ಮುಂದಾಗಿದ್ದಾರೆ ಎಂಬುದು ಗೊತ್ತಾಗಿದೆ. ಆದರೆ ಗ್ರಾಹಕರು ಭೀತಿಗೆ ಒಳಗಾಗಿ ಸಿಲಿಂಡರ್ ಬುಕ್ ಮಾಡಬೇಕಾದ ಪರಿಸ್ಥಿತಿ ಇಲ್ಲ' ಎಂದು ಸುಜಾತಾ ಅವರು ಹೇಳಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಅಕ್ರಮ ಸಂಗ್ರಹ ಹಾಗೂ ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಸಚಿವಾಲಯವು ತಿಳಿಸಿದೆ. ಭಾರತವು ಸರಿಸುಮಾರು 40 ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.
'ನಮಗೆ ಪ್ರತಿದಿನ 55 ಲಕ್ಷ ಬ್ಯಾರಲ್ ಕಚ್ಚಾ ತೈಲ ಬೇಕು... ವಿವಿಧ ಮೂಲಗಳಿಂದ ನಾವು ಇಂದು ಪಡೆದಿರುವ ಕಚ್ಚಾ ತೈಲವು, ಇದೇ ಅವಧಿಯಲ್ಲಿ ಹೊರ್ಮುಜ್ ಜಲಸಂಧಿಯ ಮೂಲಕ ಬರಬಹುದಾಗಿದ್ದ ಕಚ್ಚಾ ತೈಲದ ಪ್ರಮಾಣಕ್ಕಿಂತ ಹೆಚ್ಚಿದೆ' ಎಂದು ಕೂಡ ಸುಜಾತಾ ಅವರು ಮಾಹಿತಿ ನೀಡಿದ್ದಾರೆ.
ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಬೇರೆ ಬೇರೆ ಕಡೆಗಳಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿವೆ. ಹೀಗಾಗಿ, ಈಗ ಶೇ 70ರಷ್ಟು ಕಚ್ಚಾ ತೈಲ ಆಮದಿಗೆ ಹೊರ್ಮುಜ್ ಜಲಸಂಧಿಯನ್ನು ಬಳಸಬೇಕಾದ ಅಗತ್ಯ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಎಲ್‌ಎನ್‌ಜಿ ಹೊತ್ತ ಎರಡು ಹಡಗುಗಳು ಕೆಲವೇ ದಿನಗಳಲ್ಲಿ ಭಾರತ ತಲುಪಲಿವೆ, ಆಗ ದೇಶದಲ್ಲಿ ಇಂಧನ ಪೂರೈಕೆಯು ಇನ್ನಷ್ಟು ಸುಧಾರಿಸಲಿದೆ ಎಂದು ಹೇಳಿದ್ದಾರೆ.

