HEALTH TIPS

ಸ್ಪೀಕರ್‌ ಓಂ ಬಿರ್ಲಾ ಪದಚ್ಯುತಿಗೆ ಮಂಡಿಸಿದ್ದ ನಿರ್ಣಯ: ಅವಿಶ್ವಾಸಕ್ಕೆ ಸೋಲು

ನವದೆಹಲಿ (PTI): ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. 

ಅವಿಶ್ವಾಸ ನಿರ್ಣಯ ಮಂಡನೆ ಮೇಲಿನ ಚರ್ಚೆಯು ಲೋಕಸಭೆಯಲ್ಲಿ ಸತತ ಎರಡು ದಿನ ಮುಂದುವರಿಯಿತು.

ಗೃಹ ಸಚಿವ ಅಮಿತ್‌ ಶಾ ಅವರು ಸರ್ಕಾರದ ಪರ ಉತ್ತರ ನೀಡಿದ ಬಳಿಕ ಪ್ರಸ್ತಾವವನ್ನು ಧ್ವನಿಮತಕ್ಕೆ ಹಾಕಲಾಯಿತು. ನಿರ್ಣಯಕ್ಕೆ ಸೋಲಾಗಿದೆ ಎಂದು ಬುಧವಾರ ಘೋಷಿಸುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಭಾರಿ ಗದ್ದಲ ಎಬ್ಬಿಸಿದರು. ಅಮಿತ್‌ ಶಾ ಮತ್ತು ಸ್ಪೀಕರ್‌ ಪೀಠದಲ್ಲಿದ್ದ ಜಗದಾಂಬಿಕಾ ಪಾಲ್‌ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ, ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದಕ್ಕೂ ಮುನ್ನ, 'ಪ್ರತಿಭಟನೆ ನಿಲ್ಲಿಸಿ, ಕುರ್ಚಿಯಲ್ಲಿ ಕುಳಿತುಕೊಂಡರೆ ಮಾತ್ರ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುತ್ತೇನೆ' ಎಂದು ಜಗದಾಂಬಿಕಾ ಪಾಲ್‌ ಮನವಿ ಮಾಡಿದರು. ಆದರೆ, ವಿರೋಧ ಪಕ್ಷದ ಸದಸ್ಯರು ಇದಕ್ಕೆ ಕಿವಿಗೊಡದೆ ಗದ್ದಲ ಮುಂದುವರಿಸಿದರು. ಪಾಲ್‌ ಅವರು ಪ್ರಸ್ತಾವವನ್ನು ಧ್ವನಿಮತಕ್ಕೆ ಹಾಕಿದರು. ಬಳಿಕ ನಿರ್ಣಯವನ್ನು ಸದನವು ತಿರಸ್ಕರಿಸಿದೆ ಎಂದು ಪ್ರಕಟಿಸಿದರು.

ಅವಿಶ್ವಾಸ ನಿರ್ಣಯ ಮಂಡನೆ ಮೇಲಿನ ಚರ್ಚೆ ನಡೆಯುವಾಗ ಲೋಕಸಭೆ ಕಲಾಪದಲ್ಲಿ ಸದಸ್ಯರ ಸಾಲಿನಲ್ಲಿ ಕುಳಿತು ಭಾಗವಹಿಸುವುದಾಗಿ ಹೇಳಿದ್ದ ಸ್ಪೀಕರ್‌ ಓಂ ಬಿರ್ಲಾ, ಎರಡೂ ದಿನ ಗೈರಾಗಿದ್ದರು.

'ಪಕ್ಷದ ನಿಯಮದಂತೆ ಸದನ ನಡೆಯುವುದಿಲ್ಲ'

'ಸ್ಪೀಕರ್‌ ಓಂ ಬಿರ್ಲಾ ಅವರು ಲೋಕಸಭೆಯ ನಿಷ್ಪಕ್ಷಪಾತ ಪಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷದ ನಿಯಮದಂತೆ ಸದನ ನಡೆಸಲು ಸಾಧ್ಯವಿಲ್ಲ' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

'ಲೋಕಸಭಾ ಸ್ಪೀಕರ್‌, ಆಡಳಿತ ಮತ್ತು ವಿರೋಧ ಪಕ್ಷ ಎರಡನ್ನೂ ಪ್ರತಿನಿಧಿಸುತ್ತಾರೆ. ಸದನಕ್ಕೆ ತನ್ನದೇ ಆದ ನಿಯಮಗಳಿವೆ, ಒಂದು ಪಕ್ಷದ ನಿಯಮದಂತೆ ಸದನ ನಡೆಯುವುದಿಲ್ಲ' ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

'ಸುಮಾರು ನಾಲ್ಕು ದಶಕಗಳ ನಂತರ ಸ್ಪೀಕರ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಇದು ಸಾಮಾನ್ಯ ಘಟನೆಯಲ್ಲ. ವಿರೋಧ ಪಕ್ಷಗಳು ಸ್ಪೀಕರ್‌ ಅವರ ಬದ್ಧತೆ, ಸಂಸತ್ತಿನ ವಿಶ್ವಾಸಾರ್ಹತೆ ಪ್ರಶ್ನಿಸಿರುವುದು ಸಂಸದೀಯ ರಾಜಕಾರಣದಲ್ಲಿ ದುರದೃಷ್ಟಕರ ಘಟನೆ. ಇದು ದೇಶದ ಪ್ರಜಾಪ್ರಭುತ್ವದ ಘನತೆಯನ್ನೇ ಪ್ರಶ್ನಿಸಿದಂತೆ' ಎಂದು ಅವರು ಹೇಳಿದರು.

ಎಲ್‌ಪಿಜಿ ಗದ್ದಲ: ಬುಧವಾರ ಬೆಳಿಗ್ಗೆ ಕಲಾಪ ಆರಂಭವಾದಾಗ ವಿರೋಧ ಪಕ್ಷಗಳ ಸದಸ್ಯರು ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಗದ್ದಲ ಎಬ್ಬಿಸಿದರು. ಇದರಿಂದ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. 'ಸರ್ಕಾರ ಮೊದಲು ಎಲ್‌ಪಿಜಿ ದರ ಇಳಿಸಲಿ' ಎಂದು ಕಾಂಗ್ರಸ್‌ ಸಂಸದೆ ಶೆಲ್ಜಾ ಕುಮಾರಿ ಒತ್ತಾಯಿಸಿದರು.

'ವಿರೋಧ ಪಕ್ಷಗಳ ಸದಸ್ಯರಿಗೆ ದೇಶದ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ' ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ದೂರಿದರು.

'ಪ್ರತಿಭಟನೆ ನಿಲ್ಲಿಸಿ, ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಲಾಗುವುದು' ಎಂದು ಸಭಾಧ್ಯಕ್ಷರ ಪೀಠದಲ್ಲಿದ್ದ ದಿಲೀಪ್‌ ಸೈಕಾ ಹಲವು ಬಾರಿ ಮನವಿ ಮಾಡಿದರೂ, ವಿರೋಧ ಪಕ್ಷಗಳ ಸದಸ್ಯರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಪ್ರತಿಭಟನೆ ಮುಂದುವರಿದಾಗ ಸ್ಪೀಕರ್‌ ಕಲಾಪವನ್ನು ಮುಂದೂಡಿದರು.

 ಅಮಿತ್‌ ಶಾ ಜಗದಾಂಬಿಕಾ ಪಾಲ್‌ - ರವಿಶಂಕರ್‌ ಪ್ರಸಾದ್‌ ಬಿಜೆಪಿ ಸದಸ್ಯಮುಖಂಡರೊಬ್ಬರ ಅಹಂ ತೃಪ್ತಿಪಡಿಸುವ ಆಯುಧವಾಗಿ ಸ್ಪೀಕರ್‌ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಬಳಕೆಯಾಗಿರುವುದು ನೋವಿನ ವಿಚಾರಗೌರವ್‌ ಗೊಗೊಯಿ ವಿರೋಧ ಪ‍ಕ್ಷದ ಉಪ ನಾಯಕಲೋಕಸಭೆಯ ಉಪ ಸಭಾಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ವಿಫಲವಾದ ಸರ್ಕಾರವು ಸಾಂವಿಧಾನಿಕ ನಿರ್ವಾತ ಸೃಷ್ಟಿಸಿದೆ

ಸದನ ಇಡೀ ದೇಶ ಪ್ರತಿನಿಧಿಸುತ್ತದೆ: ರಾಹುಲ್‌

ನವದೆಹಲಿ (ಪಿಟಿಐ): 'ಲೋಕಸಭೆಯಲ್ಲಿ ಮಾತನಾಡಲು ಪದೇ ಪದೇ ಅವಕಾಶ ನಿರಾಕರಿಸಲಾಗುತ್ತಿದೆ. ಸದನವು ಕೇವಲ ಒಂದು ಪಕ್ಷವನ್ನು ಪ್ರತಿನಿಧಿಸುವುದಿಲ್ಲ ಬದಲಿಗೆ ಇಡೀ ದೇಶವನ್ನು ಪ್ರತಿನಿಧಿಸುತ್ತದೆ' ಎಂದು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದರು.

ಸ್ಪೀಕರ್‌ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ಮಂಡನೆ ಮೇಲಿನ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ರಾಹುಲ್‌ 'ಪ್ರಧಾನಿ ಮೋದಿ ಅವರು ರಾಜಿ ಮಾಡಿಕೊಂಡಿದ್ದಾರೆ. ಇದರ ಫಲಿತಾಂಶ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ' ಎಂದರು. ಸಂಸದೀಯ ಕಾರ್ಯವಿಧಾನಗಳನ್ನು ಉಲ್ಲೇಖಿಸಿದ ಬಿಜೆಪಿಯ ರವಿಶಂಕರ್‌ ಪ್ರಸಾದ್‌ 'ವಿಶೇಷವಾಗಿ ರಾಷ್ಟ್ರೀಯ ಭದ್ರತೆ ವಿಷಯ ಬಂದಾಗ ವಿರೋಧ ಪಕ್ಷದ ನಾಯಕ ಸದನದಲ್ಲಿ ಎಚ್ಚರಿಕೆಯಿಂದ ಮಾತುಗಳನ್ನು ಬಳಸಬೇಕು' ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ 'ಚರ್ಚೆ ವೇಳೆ ನನ್ನ ಹಸರನ್ನೇ ಪದೇ ಪದೇ ಎಳೆದು ತಂದು ನನ್ನ ವಿರುದ್ಧ ಕೆಟ್ಟ ಪದಗಳನ್ನು ಬಳಸಲಾಗುತ್ತಿದೆ' ಎಂದರು. 'ಸದನದ ಚರ್ಚಾ ವಿಷಯ 'ಪ್ರಜಾಪ್ರಭುತ್ವದ ಕಾರ್ಯವಿಧಾನ ಮತ್ತು ಸ್ಪೀಕರ್‌'. ಆದರೆ ಚರ್ಚೆಯಲ್ಲಿ ನನ್ನ ಹೆಸರನ್ನು ಎಳೆದು ತಂದು ನನ್ನ ವಿರುದ್ಧ ತುಚ್ಛವಾಗಿ ಮಾತನಾಡುತ್ತಿದ್ದಾರೆ.

ಸದನವು ಜನರ ಧ್ವನಿಯಾಗಬೇಕು ಸದನವು ಒಂದು ಪಕ್ಷವನ್ನು ಮಾತ್ರ ಪ್ರತಿನಿಧಿಸಬಾರದು' ಎಂದು ಹೇಳಿದರು. 'ಕೆಲವು ದಿನಗಳ ಹಿಂದೆ ವಿರೋಧ ಪಕ್ಷದ ನಾಯಕನ ಸದನದಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಯಿತು. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿ ನಡೆದಿದೆ. ಪ್ರತಿ ಬಾರಿ ಮಾತನಾಡಲು ಎದ್ದು ನಿಂತಾಗ ನನ್ನನ್ನು ತಡೆಯಲಾಗುತ್ತದೆ. ಕಳೆದ ಬಾರಿ ಪ್ರಧಾನಿ ರಾಜಿ ಮಾಡಿಕೊಂಡಿದ್ದರ ಬಗ್ಗೆ ಎಪ್‌ಸ್ಟೈನ್ ಫೈಲ್ಸ್‌ ಬಗ್ಗೆ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ 'ಅಪ್ರಕಟಿತ' ಪುಸ್ತಕದ ಬಗ್ಗೆ ಉಲ್ಲೇಖ ಮಾಡಲು ಮುಂದಾದಾಗ ಅವಕಾಶ ನಿರಾಕರಿಸಲಾಯಿತು' ಎಂದರು. ಪೀಠದಲ್ಲಿದ್ದ ದಿಲೀಪ್‌ ಸೈಕಾ ಅವರು ರಾಹುಲ್‌ ಅವರಿಗೆ ಆರೋಪಗಳಿಗೆ ಸಂಬಂಧಿಸಿದಂತೆ ಉತ್ತರಿಸಲು ಅವಕಾಶ ನೀಡಿದರು.

'ಸಿಇಸಿ' ಪದಚ್ಯುತಿಗೆ ಸಹಿ ಸಂಗ್ರಹ

ನವದೆಹಲಿ (ಪಿಟಿಐ): ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಅವರನ್ನು ಪದಚ್ಯುತಗೊಳಿಸುವ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳ ಸದಸ್ಯರು ಬುಧವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು. ಶೀಘ್ರದಲ್ಲೇ ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್‌ ಸಲ್ಲಿಸುವ ಯೋಜನೆಯನ್ನು ಸಂಸದರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. '

ಲೋಕಸಭೆಯಲ್ಲಿ ನೋಟಿಸ್‌ ಸಲ್ಲಿಸಲು ಇದುವರೆಗೆ 120 ಸಂಸದರು ಹಾಗೂ ರಾಜ್ಯಸಭೆಯಲ್ಲಿ ನೋಟಿಸ್‌ ಸಲ್ಲಿಸಲು 60 ಸಂಸದರು ಸಹಿ ಮಾಡಿದ್ದಾರೆ. ಗುರುವಾರ ಅಥವಾ ಶುಕ್ರವಾರ ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್‌ ಸಲ್ಲಿಸಲಾಗುವುದು' ಎಂದು ಸಂಸದರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ನಿಯಮಗಳ ಪ್ರಕಾರ 'ಸಿಇಸಿ' ಅವರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸಲು ಕನಿಷ್ಠ 100 ಸಂಸದರು ಹಾಗೂ ರಾಜ್ಯಸಭೆಯಲ್ಲಿ50 ಸಂಸದರು ಸಹಿ ಮಾಡಬೇಕು.

ಚರ್ಚೆಗೆ ಅವಕಾಶ ಕೊಡಿ: ಮಲ್ಲಿಕಾರ್ಜನ ಖರ್ಗೆ

ನವದೆಹಲಿ: 'ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಇದರಿಂದ ದೇಶದಲ್ಲಿ ಸೃಷ್ಟಿಯಾಗಿರುವ ತೈಲ ಅನಿಲ ಬಿಕ್ಕಟ್ಟಿನ ಕುರಿತು ಸದನದಲ್ಲಿ ಪೂರ್ಣ ಪ್ರಮಾಣದ ಚರ್ಚೆಗೆ ಅವಕಾಶ ನೀಡಬೇಕು' ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜನ ಖರ್ಗೆ ಒತ್ತಾಯಿಸಿದರು. '

ಮೋದಿ ಸರ್ಕಾರದ ನಕಲಿ ಮೂಲಗಳನ್ನು ಆಧರಿಸಿದ ಭರವಸೆಗಳ ಬದಲಿಗೆ ದೇಶದ ಜನರು ಸತ್ಯವನ್ನು ತಿಳಿಯಲು ಬಯಸಿದ್ದು ಅದಕ್ಕೆ ಅರ್ಹರಾಗಿದ್ದಾರೆ. ದೇಶದ ಇಂಧನ ಸುರಕ್ಷತೆ ಖಾತ್ರಿಪಡಿಸುವ ವಿಷಯದಲ್ಲಿ ಬಿಜೆಪಿ ಸರ್ಕಾರದ ಸಂಪೂರ್ಣ ಅಸಮರ್ಥತೆ ಕಾಣುತ್ತದೆ' ಎಂದು ಅವರು ವಾಗ್ದಾಳಿ ನಡೆಸಿದರು.

'ಕೋವಿಡ್‌ -19 ಬಿಕ್ಕಟ್ಟನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸದ ಕಾರಣ ಹೆಚ್ಚಿನ ಸಾವು- ನೋವು ಉಂಟಾಯಿತು. ಈಗ ಪಶ್ಚಿಮ ಏಷ್ಯಾ ಯುದ್ಧದ ಕಾರಣದಿಂದ ಇಂಧನ ಸಂಗ್ರಹದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸದ್ಯ 74 ದಿನಗಳಿಗೆ ಸಾಕಾಗುವಷ್ಟು ಮಾತ್ರ ತೈಲ ಸಂಗ್ರಹ ದೇಶದಲ್ಲಿದೆ. ಮುನ್ನೆಚ್ಚರಿಕೆ ವಹಿಸದಿದ್ದರೆ ಆ ನಂತರ ಪರಿಸ್ಥಿತಿ ತೀರಾ ಹದಗೆಡಲಿದೆ' ಎಂದರು. 'ಇಂಧನ ಕೊರತೆಯು ಕೃಷಿ ವಲಯ ಮತ್ತು ರಸಗೊಬ್ಬರ ಪೂರೈಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಾಗಿ ಜನರು ಕನಿಷ್ಠ 25 ದಿನ ಕಾಯುವ ಪರಿಸ್ಥಿತಿ ಬಂದಿದೆ' ಎಂದರು.

ವ್ಯತಿರಿಕ್ತ ಹೇಳಿಕೆ: ರಿಜಿಜು ವಿರುದ್ಧ ವಾಗ್ದಾಳಿ

ನವದೆಹಲಿ (ಪಿಟಿಐ): ಲೋಕಸಭೆಯಲ್ಲಿ ಮಂಗಳವಾರ ಸ್ಪೀಕರ್‌ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಮೇಲಿನ ಚರ್ಚೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಜವಾಹಾರಲಾಲ್‌ ನೆಹರೂ ಅವರ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಬುಧವಾರ ಅವರನ್ನು ತರಾಟೆಗೆ ತೆಗೆದುಕೊಂಡಿದೆ. 1954ರಲ್ಲಿ ವಿರೋಧ ಪಕ್ಷಗಳು ಜಿ.ವಿ ಮಾವಲಂಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದಾಗ ನೆಹರೂ ಅವರಿಗೆ ಚರ್ಚೆಗೆ ಕೇವಲ ಒಂದೂವರೆ ಗಂಟೆ ಮಾತ್ರ ನೀಡಲಾಗಿತ್ತು. ನೆಹರೂ ಅವರು ವಿರೋಧ ಪಕ್ಷಗಳಿಗೆ ಹೆಚ್ಚಿನ ಸಮಯ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಕಿರಣ್‌ ರಿಜಿಜು ಅವರು ಇದಕ್ಕೆ ವ್ಯತಿರಿಕ್ತ ಹೇಳಿಕೆ ನಿಡಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries