ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ರಾಷ್ಟ್ರೀಯ ಹೆದ್ದಾರಿ ಸನಿಹದ ನಿರ್ಮಾಣಹಂತದ ಬಹುಮಹಡಿ ಕಟ್ಟಡದ ತಳಭಾಗದ ಹೊಂಡದಲ್ಲಿ ಪತ್ತೆಯಾಗಿರುವ ಇತರ ರಾಜ್ಯ ಕಾರ್ಮಿಕನ ಮೃತದೇಹ ಗದಗ ಬಲೇಶ್ವರ ಬಾಲಹೊಸೂರ್ ನಿವಾಸಿ ಚಂದ್ರಶೇಖರ್ ಪಟ್ಟಾಡ್(38)ಎಂಬವರದ್ದೆಂದು ಪತ್ತೆಯಾಗಿದೆ.
ಕಟ್ಟಡದ ತಳಭಾಗದಲ್ಲಿ ಲಿಫ್ಟ್ ನಿರ್ಮಾಣಕ್ಕಾಗಿ ಅಗೆಯಲಾಗಿದ್ದ ಹೊಂಡದಲ್ಲಿ ಮಂಗಳವಾರ ತಡರಾತ್ರಿ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಕಟ್ಟಡ ಮಾಲಿಕನ ಪುತ್ರ ನೀಡಿದ ಮಾಹಿತಿಯನ್ವಯ ನಗರಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹ ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದರು.
ಮೃತದೇಹದಲ್ಲಿ ಕೆಲವೊಂದು ಗಾಯದ ಗುರುತು ಕಂಡುಬಂದಿದ್ದು, ಮೇಲ್ನೋಟಕ್ಕೆ ಕೊಲೆಯೆಂದು ಸಂಶಯಿಸಲಾಗಿತ್ತು. ಹೊಂಡದ ಬಳಿ ಮೃತದೇಹವನ್ನು ಎಳೆದೊಯ್ದ ಗುರುತು ಹಾಗೂ ರಕ್ತದ ಕಲೆ ಕಂಡುಬಂದಿತ್ತು. ಚಂದ್ರಶೇಖರ್ ಪಟ್ಟಾಡ್ ಸಾವಿನ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ಇವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಮೃತದೇಹ ಪತ್ತೆಯಾದ ಸ್ಥಳದಲ್ಲಿ ಆಧಾರ್ ಕಾರ್ಡು ಒಂದು ಪತ್ತೆಯಾಗಿದ್ದು, ಇದರಲ್ಲಿದ್ದ ವಿಳಾಸದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಕಾಸರಗೋಡಿನ ನಾನಾ ಕಡೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ವಲಸೆ ಕಾರ್ಮಿಕರು ಆಗಮಿಸಿ ವಿವಿಧೆಡೆ ವಾಸಿಸುತ್ತಿದ್ದು, ಇವರಲ್ಲಿ ಬಹುತೇಕ ಮಂದಿ ಮದ್ಯ, ಗುಟ್ಕಾ ಸೇರಿದಂತೆ ಮಾದಕವಸ್ತುಗಳ ದಾಸರಾಗುತ್ತಿದ್ದು, ಪರಸ್ಪರ ಜಗಳದಲ್ಲೂ ನಿರತರಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಇದೇ ರೀತಿಯ ಜಗಳದಲ್ಲಿ ಚಂದ್ರಶೇಕರ್ ಹತ್ಯೆಯಾಗಿರಬೇಕೆಂಬ ಸಂಶಯವೂ ವ್ಯಕ್ತವಾಗಿದೆ.

