ಬದಿಯಡ್ಕ: ಉಕ್ಕಿನಡ್ಕದಲ್ಲಿ ಚಟುವಟಿಕೆ ನಡೆಸುತ್ತಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆ ವಠಾರದಿಂದ ಬೃಹತ್ ಮರಗಳನ್ನು ಕಡಿದು ಸಾಗಿಸಲಾಗಿದೆ. ಸೌದೆ ಕಡಿದು ಸಾಗಿಸುವ ನೆಪದಲ್ಲಿ, ಇಲ್ಲಿಂದ ಬೆಲೆಬಾಳುವ ಬೃಹತ್ ಮರಗಳನ್ನೂ ಕಡಿದು ಸಾಗಿಸಿರುವುದು ಸಶಯಕ್ಕೆ ಕಾರಣವಾಗಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆ ಇರುವ ಪ್ರದೇಶ ಹಲವು ಎಕರೆಗಳಷ್ಟು ವಿಸ್ತೀರ್ಣದಲ್ಲಿ ವ್ಯಾಪಿಸಿದ್ದು, ಇಲ್ಲಿಂದ ವ್ಯವಸ್ಥಿತವಾಗಿ ಮರಗಳನ್ನು ಕಡಿದು ಸಾಗಿಸಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಪೂರ್ಣಪ್ರಮಾಣದಲ್ಲಿ ಚಟುವಟಿಕೆ ನಡೆಸದ ಹಿನ್ನೆಲೆಯಲ್ಲಿ ಇಲ್ಲಿ ಉಸ್ತುವಾರಿಗಳೋ, ಅಗತ್ಯ ಸಂಖ್ಯೆಯಲ್ಲಿ ಕಾವಲುಗಾರರೋ ಇಲ್ಲದಿರುವುದು ಮರಕಳ್ಳ ದಂಧೆಕೋರರಿಗೆ ವರದಾನವಾಗಿದೆ. ಇತ್ತೀಚೆಗೆ ಕೆಲವು ಕಾರ್ಮಿಕರು ಮರ ಕಡಿದು ಸಾಗಿಸುತ್ತಿರುವುದನ್ನು ಆಸ್ಪತ್ರೆ ಕಾವಲುಗಾರರೊಬ್ಬರು ಗಮನಿಸಿದ್ದರೂ, ಈ ಬಗ್ಗೆ ಪ್ರತಿಕ್ರಿಯಿಸದಿರುವುದರಿಂದ ಸಹಜವಾಗಿ ಸ್ಥಳೀಯ ನಿವಾಸಿಗಳು ಸಂಶಯವ್ಯಕ್ತಪಡಿಸಿದ್ದಾರೆ. ಮರ ಕಡಿದು ಸಾಗಿಸಿರುವ ಬಗ್ಗೆ ನಾಗರಿಕರು ದೂರು ನೀಡಿರುವುದಾಗಿ ಮೆಡಿಕಲ್ ಕಾಲೇಜಿನ ಉಸ್ತುವಾರಿ ವೈದ್ಯ ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

