ಕೊಲಂಬೊ: ವಿಶಾಖಪಟ್ಟಣದಲ್ಲಿ ನಡೆದಿದ್ದ 'ಮಿಲನ್ 2026' ಹೆಸರಿನ ಸೇನಾ ಸಮರಾಭ್ಯಾಸ ಮುಗಿಸಿ ಹಿಂದಿರುಗುತ್ತಿದ್ದ ಇರಾನ್‌ನ 'ಬುಶೇರ್' ನೌಕೆಯಲ್ಲಿದ್ದ ಸಿಬ್ಬಂದಿಯನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿದೆ.
ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ನೌಕೆಯನ್ನು ಶ್ರೀಲಂಕಾ ಬಂದರಿನಲ್ಲಿ ನಿಲ್ಲಿಸಲು (ಡಾಕ್) ಅನುಮತಿ ಕೋರಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಶ್ರೀಲಂಕಾ, ನೌಕೆಯಲ್ಲಿದ್ದ ಅಧಿಕಾರಿಗಳು ಸೇರಿ 204 ಸಿಬ್ಬಂದಿಯನ್ನು ರಕ್ಷಿಸಿದೆ.
ಬುಶೇರ್ ನೌಕೆಯಲ್ಲಿ ಒಟ್ಟು 208 ಮಂದಿ ಸಿಬ್ಬಂದಿ ಇದ್ದರು. ಈ ಪೈಕಿ 204 ಜನರನ್ನು ರಕ್ಷಿಸಿ, 'ಪೋರ್ಟ್ ಆಫ್ ಕೊಲಂಬೊ' ಬಂದರಿಗೆ ಕರೆತರಲಾಗಿದೆ. ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ನೌಕೆಯು ಶ್ರೀಲಂಕಾ ಬಂದರು ತಲುಪುವುದು ಇನ್ನೂ ಎರಡು ದಿನವಾಗಬಹುದು. ಆದ್ದರಿಂದ ಉಳಿದ ನಾಲ್ಕು ಸಿಬ್ಬಂದಿ ನೌಕೆಯಲ್ಲಿಯೇ ಉಳಿದುಕೊಂಡಿದ್ದಾರೆ.
ಈ ಬಗ್ಗೆ ಶ್ರೀಲಂಕಾ ನೌಕಾಪಡೆಯು ಶುಕ್ರವಾರ ಮಾಹಿತಿ ನೀಡಿದೆ. 'ಇಲ್ಲಿನ ನೌಕಾ ಶಿಬಿರವೊಂದಕ್ಕೆ ಎಲ್ಲ ಸಿಬ್ಬಂದಿಯನ್ನು ಕರೆತರಲಾಗುವುದು' ಎಂದು ನೌಕಾಪಡೆ ತಿಳಿಸಿದೆ.
'ವಿಶಾಖಪಟ್ಟಣದಿಂದ ಬರುತ್ತಿದ್ದ ಇರಾನ್‌ನ ಮೊದಲ ನೌಕೆ 'ಡೆನಾ'ದ ಅಮೆರಿಕವು ದಾಳಿ ನಡೆಸಿತ್ತು. ಈ ಬಳಿಕ, ಎರಡನೇ ನೌಕೆ ಬುಶೇರ್‌ಅನ್ನು ಕೊಲೊಂಬೊ ಬಂದರಿನಲ್ಲಿ ಎರಡು ದಿನಗಳವರೆಗೆ ನಿಲ್ಲಿಸಲು ಅನುಮತಿ ಕೋರಲಾಗಿತ್ತು' ಎಂದು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಗುರುವಾರ ತಿಳಿಸಿದ್ದರು.
'ಫೆ.26ರಂದೇ ಕೋರಲಾಗಿತ್ತು'
'ಬುಶೇರ್' ನೌಕೆಯನ್ನು ಮಾರ್ಚ್ 9ರಿಂದ 13ರವರೆಗೆ ಕೊಲಂಬೊ ಬಂದರಿನಲ್ಲಿ ನಿಲ್ಲಿಸಲು ಫೆ. 26ರಂದೇ ಇರಾನ್ ಕೋರಿಕೊಂಡಿತ್ತು. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೆವು' ಎಂದು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಮಾಹಿತಿ ನೀಡಿದರು. 'ನೌಕೆಯಲ್ಲಿದ್ದ ಒಬ್ಬ ಸಿಬ್ಬಂದಿ ಮುಗ್ಗರಿಸಿ ಸಮುದ್ರದಲ್ಲಿ ಬಿದ್ದಿದ್ದಾನೆ. ಸಹಾಯ ಮಾಡಿ ಎಂದು ಫೆ. 27ರಂದು ನಮ್ಮನ್ನು ಕೋರಲಾಗಿತ್ತು. 'ಡೆನಾ' ನೌಕೆ ಮೇಲಿನ ದಾಳಿ ಬಳಿಕ 'ಬುಶೇರ್' ನಿಲ್ಲಿಸಲು ಅನುಮತಿ ಕೋರಲಾಯಿತು' ಎಂದರು.

