ಕೋಲ್ಕತ: ಪಶ್ಚಿಮ ಬಂಗಾಳದ ಬಿಧನ್‌ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಶರದ್ವತ್ ಮುಖೋಪಾಧ್ಯಾಯ ಅವರು ಮೀನು ಹಿಡಿದು ಭಾನುವಾರ ಚುನಾವಣಾ ಪ್ರಚಾರ ಮಾಡಿದರು.
'ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಂಸಾಹಾರವನ್ನು ನಿಷೇಧಿಸಲಿದೆ' ಎಂಬ ಟಿಎಂಸಿ ಆರೋಪಕ್ಕೆ ಈ ಮೂಲಕ ತಿರುಗೇಟು ನೀಡಿದರು.
ಶರದ್ವತ್ ಅವರ ವಿನೂತನ ಪ್ರಚಾರವು ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದೆ.
ದೊಡ್ಡ 'ಕಾಟ್ಲಾ' ಮೀನು ಹಿಡಿದು ಪ್ರಚಾರಕ್ಕೆ ಬಂದಿದ್ದ ಅವರು, ಮತದಾರರೊಂದಿಗೆ ಸಂವಾದ ನಡೆಸಿ 'ಟಿಎಂಸಿ ಆರೋಪ ಸುಳ್ಳು ಕಾರ್ಯಸೂಚಿಯನ್ನು ಹೊಂದಿದೆ' ಎಂದು ಹೇಳಿದರು.
'ನಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ನಾವು ನಮ್ಮ ಇಚ್ಛೆಯಂತೆ ಮೀನು, ಮಾಂಸವನ್ನು ತಿನ್ನುತ್ತೇವೆ' ಎಂದು ಹೇಳಿದರು.
ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳದ ಜನರ ಆಹಾರ ಸಂಸ್ಕೃತಿಯ ಮೇಲೆ ಹಸ್ತಕ್ಷೇಪ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಟಿಎಂಸಿಯ ಹಲವು ನಾಯಕರು ಆರೋಪಿಸಿದ್ದರು.

