ದುಬೈ: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಶುಕ್ರವಾರ ತೀವ್ರಗೊಂಡಿದೆ. ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಹೊಸದಾಗಿ ನಡೆದ ದಾಳಿಗಳಿಂದಾಗಿ ರಂಜಾನ್ ಮಾಸದ ಅಂತ್ಯ ಸೂಚಿಸುವ ಈದ್ ಉಲ್-ಫಿತ್ರ್ ಮತ್ತು ಪರ್ಷಿಯನ್ ಹೊಸ ವರ್ಷ 'ನೌರುಜ್' ಆಚರಣೆಗಳ ಮೇಲೆ ಕರಿಛಾಯೆ ಆವರಿಸಿದಂತಾಗಿದೆ.
ಕುವೈತ್, ಕತಾರ್, ಬಹರೇನ್ ಹಾಗೂ ಇಸ್ರೇಲ್‌ನ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿ ಇರಾನ್ ವೈಮಾನಿಕ ದಾಳಿ ನಡೆಸಿದೆ.
ಕುವೈತ್‌ನ 'ಮಿನಾ ಅಲ್- ಅಹ್ಮದಿ' ತೈಲ ಸಂಸ್ಕರಣಾ ಘಟಕದ ಮೇಲೆ ಇರಾನ್ ದಾಳಿ ನಡೆಸಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಪ್ರತಿದಿನ ಸುಮಾರು 7.30 ಲಕ್ಷ ಬ್ಯಾರೆಲ್ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಈ ಘಟಕದ ಮೇಲೆ ಇರಾನ್ ಈ ಹಿಂದೆಯೂ ದಾಳಿ ನಡೆಸಿತ್ತು.
ದುಬೈ ನಗರದ ಮೇಲೆ ಇರಾನ್ ಗುಂಡಿನ ದಾಳಿ ನಡೆಸಿದ್ದು, ಇದನ್ನು ಅಲ್ಲಿನ ವಾಯುರಕ್ಷಣಾ ವ್ಯವಸ್ಥೆಯು ತಡೆದಿದೆ. ಬಹರೇನ್ ವಾಯುಪ್ರದೇಶ ಪ್ರವೇಶಿಸಿದ್ದ ಕ್ಷಿಪಣಿಯೊಂದನ್ನು ವಾಯುರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ. ಈ ವೇಳೆ ಸಿಡಿದ ಚೂರುಗಳು ಗೋದಾಮಿನ ಮೇಲೆ ಬಿದ್ದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ.
ತೈಲ ಸಮೃದ್ಧವಾದ ಪೂರ್ವ ಪ್ರಾಂತ್ಯವನ್ನು ಗುರಿಯಾಗಿಸಿ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಅವುಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಮೊಳಗಿದ ಸೈರನ್: ಇಸ್ರೇಲ್‌ನ ಜೆರುಸಲೇಂ ಮತ್ತು ಉತ್ತರ ಭಾಗದ ಮೇಲೆ ದಾಳಿ ನಡೆಯುವ ಬಗ್ಗೆ ಎಚ್ಚರಿಕೆ ನೀಡುವ ಸೈರನ್‌ಗಳು ಶುಕ್ರವಾರ ಮುಂಜಾನೆ ಮೊಳಗಿದವು. ಹೀಗಾಗಿ, ಜನರು ಮತ್ತೆ ಆಶ್ರಯ ತಾಣಗಳಿಗೆ ಹೋಗುವಂತಾಯಿತು. ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.
ಇರಾನ್ ಮೇಲೆ ನಿರಂತರವಾಗಿ ದಾಳಿ ಮಾಡುವುದರ ಜೊತೆಗೆ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಲೆಬನಾನ್ ಮೇಲೆ ಇಸ್ರೇಲ್ ನಿಯಮಿತವಾಗಿ ದಾಳಿ ನಡೆಸಿದೆ. ಇಸ್ರೇಲ್ ತನ್ನ ದಾಳಿಯನ್ನು ಸಿರಿಯಾದವರೆಗೂ ವಿಸ್ತರಿಸಿದೆ.
ಅಲಿ ಮೊಹಮ್ಮದ್ ನೈನಿ ಹತ್ಯೆ
ಇಸ್ರೇಲ್-ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ವಕ್ತಾರ ಅಲಿ ಮೊಹಮ್ಮದ್ ನೈನಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ವಾಹಿನಿ ಶುಕ್ರವಾರ ವರದಿ ಮಾಡಿದೆ. 'ಅಮೆರಿಕ-ಇಸ್ರೇಲ್ ನಡೆಸುತ್ತಿರುವ ದಾಳಿಗೆ ಎದುರೇಟು ನೀಡಲಾಗುವುದು. ಇದಕ್ಕಾಗಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಮುಂದುವರಿಸಲಾಗುತ್ತಿದೆ' ಎಂದು ನೈನಿ ಹೇಳಿದ್ದರು. ಈ ಹೇಳಿಕೆ ನೀಡಿದ ಕೆಲ ಸಮಯದ ಬಳಿಕ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅವರು ಹತರಾದರು.
ಖಾರ್ಗ್ ದ್ವೀಪ ವಶ: ಟ್ರಂಪ್
ಇಂಗಿತ ವಾಷಿಂಗ್ಟನ್: ತೈಲ ಸಾಗಿಸುವ ಹಡಗುಗಳ ಸುಗಮ ಸಂಚಾರಕ್ಕೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಇರಾನ್ ಮೇಲೆ ಒತ್ತಡ ಹೇರುವುದಕ್ಕಾಗಿ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಶೀಲಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದೆಡೆ ಇರಾನ್ ಜೊತೆಗಿನ ಯುದ್ಧಕ್ಕಾಗಿ ಹೆಚ್ಚುವರಿ 200 ಶತಕೋಟಿ ಡಾಲರ್(ಸುಮಾರು ₹18.73 ಲಕ್ಷ ಕೋಟಿ) ಮೊತ್ತ ಬಿಡುಗಡೆಗೆ ಸಂಸತ್‌ನ ಅನುಮೋದನೆ ಪಡೆಯುವುದಾಗಿ ಟ್ರಂಪ್ ಹೇಳಿದ್ದಾರೆ. ಅಮೆರಿಕದ ವಾರ್ಷಿಕ ರಕ್ಷಣಾ ಬಜೆಟ್‌ನ ಸುಮಾರು ನಾಲ್ಕನೇ ಒಂದು ಭಾಗದಷ್ಟಿರುವ ಈ ಮೊತ್ತಕ್ಕೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಸಂಸದರಿಂದ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಇರಾನ್‌ನ ಇಂಧನ ಕ್ಷೇತ್ರಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಹೇಳಿರುವುದಾಗಿಯೂ ಟ್ರಂಪ್ ತಿಳಿಸಿದ್ದಾರೆ. ಯುದ್ಧದಿಂದ ಆರ್ಥಿಕತೆ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಅಮೆರಿಕನ್ನರಿಗೆ ಭರವಸೆ ನೀಡಲು ಪ್ರಯತ್ನಿಸಿರುವ ಅವರು ಯಾವುದೇ ಹೆಚ್ಚಿನ ವಿವರಣೆ ನೀಡದೆ 'ಇದು ಶೀಘ್ರದಲ್ಲೇ ಕೊನೆಗೊಳ್ಳಲಿದೆ' ಎಂದು ಗುರುವಾರ ಹೇಳಿದ್ದರು. ಅಲ್ಲದೆ 'ಇರಾನ್‌ಗೆ ಭೂಸೇನೆಯನ್ನು ಕಳುಹಿಸುವುದಿಲ್ಲ' ಎಂದೂ ಹೇಳಿದ್ದರು. ಆದರೆ ಈ ಬಗ್ಗೆ ತಮ್ಮ ನಿರ್ಧಾರವನ್ನು ಬದಲಿಸುವ ಸಾಧ್ಯತೆಯನ್ನು ಮುಕ್ತವಾಗಿಟ್ಟಿದ್ದಾರೆ.
ಪ್ರವಾಸಿ ಮನರಂಜನಾ ತಾಣಗಳೇ ಗುರಿ: ಇರಾನ್
ಬೆದರಿಕೆ ಪ್ರಪಂಚದಾದ್ಯಂತ ಇರುವ ಪ್ರವಾಸಿ ಹಾಗೂ ಮನರಂಜನಾ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಇರಾನ್ ಶುಕ್ರವಾರ ಬೆದರಿಕೆ ಒಡ್ಡಿದೆ. 'ಇರಾನ್‌ನ ಶತ್ರುಗಳಿಗೆ ವಿಶ್ವದೆಲ್ಲೆಡೆ ಇರುವ ಉದ್ಯಾನಗಳು ಮನರಂಜನೆ ಪ್ರದೇಶಗಳು ಹಾಗೂ ಪ್ರವಾಸಿ ತಾಣಗಳು ಸುರಕ್ಷಿತವಾಗಿ ಇರುವುದಿಲ್ಲ. ಇದಕ್ಕಾಗಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ' ಎಂದು ಸೇನೆಯ ವಕ್ತಾರ ಜನರಲ್ ಅಬುಲ್‌ಫಜಲ್ ಶೇಕರ್ಚಿ ಎಚ್ಚರಿಸಿದ್ದಾರೆ.

