ನವದೆಹಲಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಸೀಮಿತವಾಗಿರಲಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
'ಕೇರಳ ರಾಜಕೀಯದಲ್ಲಿ ಬಿಜೆಪಿಗೆ 'ಕಿಂಗ್ ಮೇಕರ್' ಆಗಲು ಸಾಧ್ಯವಿಲ್ಲ. ಹೆಚ್ಚೆಂದರೆ ತನ್ನದೇ ಹಿಂದಿನ ಸಾಧನೆಯನ್ನು ಉತ್ತಮಪಡಿಸಿಕೊಳ್ಳಬಹುದು' ಎಂದು ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಾಯಕರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ತರೂರ್ ಬಿಜೆಪಿ ಪರ ಒಲವು ತೋರಿರುವ ಬಗ್ಗೆ ವರದಿಯಾಗಿತ್ತು.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕೇರಳ ರಾಜಕಾರಣದ ಕುರಿತು ಅವಲೋಕಿಸಿರುವ ತರೂರ್, 'ಪ್ರಮುಖವಾಗಿಯೂ ಆಡಳಿತಾರೂಢ ಎಲ್‌ಡಿಆಫ್ ಹಾಗೂ ಯುಡಿಎಫ್ ನಡುವೆ ಸ್ಪರ್ಧೆ ಏರ್ಪಟ್ಟಿದೆ' ಎಂದಿದ್ದಾರೆ.
'ಕೇರಳದಲ್ಲಿ ತ್ರಿಕೋನ ಸ್ಪರ್ಧೆಯಿಲ್ಲ. ಬಿಜೆಪಿ ಶೂನ್ಯ ಸಾಧನೆ ಹೊಂದಿರುವ ಪಕ್ಷ. ಹಾಗಾಗಿ ಶೂನ್ಯದಿಂದ ಒಂದೆರಡು ಸ್ಥಾನಗಳನ್ನು ಗೆದ್ದರೂ ಸಂಭ್ರಮಿಸುತ್ತಾರೆ' ಎಂದು ಹೇಳಿದ್ದಾರೆ.
'ಕೇರಳದಲ್ಲಿ ಬಿಜೆಪಿ ಕಿಂಗ್ ಮೇಕರ್ ಆಗುವ ಸಾಧ್ಯತೆ ಇಲ್ಲ. ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಪೈಪೋಟಿ ನಡೆಯಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ' ಎಂದಿದ್ದಾರೆ.
'ಹಾಗಿದ್ದರೂ ಬಿಜೆಪಿಯನ್ನು ಕಡೆಗಣಿಸುತ್ತಿಲ್ಲ. ಏಕೆಂದರೆ ಪ್ರತಿಯೊಂದು ಕ್ಷೇತ್ರವೂ ನಿರ್ಣಾಯಕವಾಗಿದೆ' ಎಂದು ಹೇಳಿದ್ದಾರೆ.
ನಾನು ಸಿಎಂ ಆಕಾಂಕ್ಷಿಯಲ್ಲ: ತರೂರ್
'ನಾನು ಮುಖ್ಯಮಂತ್ರಿ ಆಕಾಂಕ್ಷಿಯಲ್ಲ. ಏಕೆಂದರೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಚುನಾಯಿತ ಅಭ್ಯರ್ಥಿಗಳನ್ನೇ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಬೇಕು' ಎಂದು ತರೂರ್ ಹೇಳಿದ್ದಾರೆ.
140 ಸದಸ್ಯ ಬಲದ ಕೇರಳದಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

