ಕೋಲ್ಕತ್ತ: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೃಣಮೂಲ ಕಾಂಗ್ರೆಸ್ ಕಿಡಿಕಾರಿದೆ.
'ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಯು ಧ್ರುವೀಕರಣ ಮಾಡಲು ಯತ್ನಿಸುತ್ತಿದ್ದು, ಮಹಿಳೆಯರ ಸುರಕ್ಷತೆ ಸೇರಿದಂತೆ ತನ್ನದೇ ಸರ್ಕಾರದ ಹಲವಾರು ಸಮಸ್ಯೆಗಳ ಕುರಿತಂತೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ' ಎಂದು ಆರೋಪಿಸಿದೆ.
ಶಾ ಆರೋಪದ ಬೆನ್ನಲ್ಲೇ, ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಟಿಎಂಸಿ ಹಿರಿಯ ನಾಯಕರಾದ ಮಹುವಾ ಮೊಯಿತ್ರಾ, ಬ್ರತ್ಯ ಬಸು ಹಾಗೂ ಕೀರ್ತಿ ಅಜಾದ್ ಅವರು ಬಿಜೆಪಿಯ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು.
ಮಣಿಪುರದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಹಿಂಸಾಚಾರ, ಬಿಜೆಪಿ ರಾಜ್ಯಗಳಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಅಕ್ರಮ ವಲಸಿಗರ ಕುರಿತು ಕೇಂದ್ರ ಸರ್ಕಾರದ ನಿರ್ವಹಣೆ ಕುರಿತಂತೆ ಈ ವೇಳೆ ಮುಖಂಡರು ಪ್ರಶ್ನಿಸಿದರು.
'ಮಹಿಳೆಯರ ಸುರಕ್ಷತೆ ಕುರಿತಂತೆ ಟಿಎಂಸಿ ಸರ್ಕಾರದ ಕುರಿತಂತೆ ಗೃಹ ಸಚಿವ ಶಾ ಪ್ರಶ್ನಿಸಿದ್ದಾರೆ. ಹಾಗಿದ್ದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಸುರಕ್ಷತೆ ಹೇಗಿದೆ? ಎಂದು ಪ್ರಶ್ನಿಸಿದ್ದಾರೆ.
'ಮಣಿಪುರದ ಹಿಂಸಾಚಾರದ ಕುರಿತಂತೆ ಶಾ ಮೊದಲು ಉತ್ತರಿಸಲಿ. ಕಳೆದ ಮೂರು ವರ್ಷಗಳಿಂದಲೂ ಅಲ್ಲಿ ನಿರಂತರ ರಕ್ತಪಾತವಾಗುತ್ತಿದೆ' ಎಂದು ತಿರುಗೇಟು ನೀಡಿದ್ದಾರೆ.
'ಬಿಜೆಪಿಯು ಕಳೆದೊಂದು ದಶಕದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ದೇಶದ ಗಡಿ ಹಂಚಿಕೊಂಡ ಹಲವು 15 ರಾಜ್ಯಗಳಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತಿದ್ದು, ಅಲ್ಲಿ ಕೂಡ ಒಳ ನುಸುಳಿವಿಕೆ ನಿರಂತರವಾಗಿದೆ. ಅಮಿತ್ ಶಾ ಅವರೇ ಗೃಹ ಮಂತ್ರಿಯಾಗಿದ್ದಾರೆ. ಹಾಗಿದ್ದ ಮೇಲೆ ಅವರು ಯಾರಿಗಾಗಿ ಕಾಯುತ್ತಿದ್ದಾರೆ' ಎಂದು ಬ್ರತ್ಯ ಬಸು ಪ್ರಶ್ನಿಸಿದ್ದಾರೆ.
'ಅಕ್ರಮ ವಲಸಿಗರನ್ನು ಗುರುತಿಸಿ, ಹೊರಹಾಕಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ನಿಯಂತ್ರಣದಲ್ಲಿರುವ ಚುನಾವಣಾ ಆಯೋಗವು ವಿದೇಶಿ ಪ್ರಜೆಗಳ ಹೆಸರುಗಳನ್ನು ಮತಪಟ್ಟಿಯಲ್ಲಿ ಗುರುತಿಸಲು ಏಕೆ ವಿಫಲವಾಗಿದೆ' ಎಂದು ಪ್ರಶ್ನಿಸಿದ್ದಾರೆ.
'ಅಸ್ಸಾಂನಲ್ಲಿ ರಚಿಸಿರುವ ವಲಸಿಗರ ಬಂಧನ ಕೇಂದ್ರದ ಮಾದರಿಯನ್ನು ಬಂಗಾಳಕ್ಕೆ ತರಲು ಬಿಜೆಪಿ ಯತ್ನಿಸುತ್ತಿದೆ. ಒಂದೊಮ್ಮೆ ಒಳನುಸುಳುವಿಕೆ ಎಂಬುದು ಸಮಸ್ಯೆಯಾಗಿದ್ದರೆ, ಅದನ್ನು ನಿವಾರಿಸುವ ಪ್ರಾಥಮಿಕ ಕರ್ತವ್ಯ ಕೇಂದ್ರ ಸರ್ಕಾರದ್ದಾಗಿದೆ' ಎಂದು ಟಿಎಂಸಿ ನಾಯಕರು ನೆನಪಿಸಿದ್ದಾರೆ.

ಪಶ್ಚಿಮ ಬಂಗಾಳದ ರಾಯ್‌ಗಂಜ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಚುನಾವಣಾ ಪ್ರಚಾರ ನಡೆಸಿದರು
ಕೀರ್ತಿ ಅಜಾದ್ ಟಿಎಂಸಿ ಸಂಸದಇತಿಹಾಸದಲ್ಲಿಯೇ ತಮ್ಮ ವಿರುದ್ಧ ಪ್ರಕರಣಗಳನ್ನು ಹೊಂದಿರುವ ಏಕೈಕ ಗೃಹ ಸಚಿವ ಅಮಿತ್ ಶಾ. ರಾಜ್ಯದ ಅಭಿವೃದ್ಧಿ ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ₹1 ಲಕ್ಷ ಕೋಟಿಯಷ್ಟು ಹಣ ನೀಡದೆ ತಡೆಹಿಡಿದಿದ್ದು ಈ ಬಗ್ಗೆ ಅವರು ಮಾತನಾಡಿಲ್ಲಮಹುವಾ ಮೊಯಿತ್ರಾ ಟಿಎಂಸಿ ಸಂಸದೆ (ಅಮಿತ್ ಶಾ ಉಲ್ಲೇಖಿಸಿ ಟೀಕೆ)ವಿದೂಷಕ ಸಿಂಹಾಸನದ ಮೇಲೆ ಕುಳಿತಾಗ ಆತ ರಾಜನಾಗುವುದಿಲ್ಲ. ಅದು ಸರ್ಕಸ್ ಆಗುತ್ತದೆ
'ಬಂಗಾಳವನ್ನು ನಾಶಪಡಿಸಲು ಯತ್ನಿಸಿದರೆ ಬಿಜೆಪಿ ನಾಶ'
'ಬಂಗಾಳವನ್ನು ನಾಶಪಡಿಸಲು ಯತ್ನಿಸಿದರೆ ಬಿಜೆಪಿಯು ಇಡೀ ದೇಶದಲ್ಲಿಯೇ ನಾಶವಾಗಲಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ರಾಜ್ಯದ ವಿವಿಧೆಡೆ ಶನಿವಾರ ಚುನಾವಣಾ ರ‍್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು 'ಚುನಾವಣಾ ಆಯೋಗವು ಬಿಜೆಪಿಯ ಅಣತಿಯಂತೆ ಕೆಲಸ ಮಾಡುತ್ತಿದ್ದು ಎಸ್‌ಐಆರ್ ಮೂಲಕ ಮತದಾರರ ಹೆಸರುಗಳನ್ನು ಅಳಿಸಿಹಾಕುತ್ತಿದೆ' ಎಂದು ತಿಳಿಸಿದ್ದಾರೆ. 'ರಾಜ್ಯದಲ್ಲಿ ಸತತ ನಾಲ್ಕನೇ ಅವಧಿಗೆ ಪಕ್ಷವು ಅಧಿಕಾರ ಹಿಡಿದ ಬಳಿಕ ದೆಹಲಿಯಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ವಿರೋಧಿ ಎಲ್ಲ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುತ್ತೇನೆ' ಎಂದು ಹೇಳಿದ್ದಾರೆ. 'ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬುಲ್ಡೋಜರ್ ಬಳಸಿಕೊಂಡು ಪ್ರತಿಯೊಬ್ಬರನ್ನು ಹೊರದಬ್ಬುತ್ತದೆ. ಪಕ್ಷವು ಬಂಗಾಳಕ್ಕಿರುವ ರಾಜ್ಯದ ಮಾನ್ಯತೆ ರದ್ದುಪಡಿಸುವ ಯೋಜನೆ ಬಿಜೆಪಿಗಿದೆ' ಎಂದು ಆರೋಪಿಸಿದ್ದಾರೆ. 'ಬಂಗಾಳವನ್ನು ಬಿಜೆಪಿಯು ನಾಶಪಡಿಸಲು ಯತ್ನಿಸಿದರೆ ಬಿಜೆಪಿಯು ಇಡೀ ದೇಶದಾದ್ಯಂತ ಅಧಿಕಾರ ಕಳೆದುಕೊಳ್ಳಲಿದೆ' ಎಂದು ತಿಳಿಸಿದ್ದಾರೆ. 'ಬಿಜೆಪಿ ಆಜ್ಞೆಯಂತೆ ಕೆಲಸ ಮಾಡುತ್ತಿರುವ ಚುನಾವಣಾ ಆಯೋಗವು ಎಸ್‌ಐಆರ್ ಮೂಲಕ ರಾಜ್ಯದ 1.20 ಕೋಟಿ ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆದುಹಾಕಿದೆ. ಎಲ್ಲದಕ್ಕೂ ಲಕ್ಷಣ ರೇಖೆ ಇರಬೇಕು ಬಿಜೆಪಿಯೂ ಎಲ್ಲ ಮಿತಿಗಳನ್ನು ದಾಟಿದೆ' ಎಂದು ಮಮತಾ ದೂರಿದ್ದಾರೆ.

