ಶ್ರೀನಗರ (PTI): ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಹಲವೆಡೆ ಸಂಭವಿಸಿದ ಹಿಮಪಾತದಲ್ಲಿ ಮಗು, ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ. ದುರಂತದಲ್ಲಿ 5 ಮಂದಿ ಗಾಯಗೊಂಡಿದ್ದಾರೆ.
ಝೋಜಿಲಾ ಪಾಸ್‌ನ ಜಿರೋ ಪಾಯಿಂಟ್ ಹಾಗೂ ಮಿನಿಮಾರ್ಗ್ ಸಮೀಪ ಹಿಮಪಾತ ಸಂಭವಿಸಿದ್ದು, ಹಲವು ವಾಹನಗಳು ಸಿಲುಕಿಕೊಂಡಿವೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ಸಿಆರ್‌ಪಿಎಫ್, ಲಡಾಕ್ ಪೊಲೀಸರು ಸೇರಿದಂತೆ ಹಲವು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಹಿಮ ತೆರವುಗೊಳಿಸಲು ಶ್ರಮಿಸಿದರು.
ದುರಂತದಲ್ಲಿ ಏಳು ಮಂದಿ ಮೃತಪಟ್ಟಿರುವುದನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು 'ಎಕ್ಸ್' ಮೂಲಕ ಫೋಸ್ಟ್ ಮಾಡಿ ಖಚಿತಪಡಿಸಿದ್ದಾರೆ. 'ಮೂರು ವಾಹನಗಳು ಈಗಲೂ ಹಿಮಪಾತದಲ್ಲಿ ಸಿಲುಕಿಕೊಂಡಿವೆ' ಎಂದು ಗಾಂದರ್‌ಬಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಖಲೀಲ್ ಪೊಸ್ವಾಲ್ ತಿಳಿಸಿದ್ದಾರೆ.

