ಅಗರ್ತಲಾ: ಬಾಗ್ಮಾ (ಪರಿಶಿಷ್ಟ ಪಂಗಡ) ಕ್ಷೇತ್ರದ ಎರಡು ಬಾರಿಯ ಶಾಸಕ ರಾಮ್ ಪಾದ ಜಮಾತಿಯಾ ತ್ರಿಪುರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. 1978ರಲ್ಲಿ ಎಡರಂಗದ ಹಿರಿಯ ನಾಯಕ ಸುಧನ್ಯ ದೆಬ್ಬರ್ಮ ಅವರು ತ್ರಿಪುರ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ, ರಾಮ್ ಪಾದ ಜಮಾತಿಯಾ ಆ ಹುದ್ದೆಗೆ ಆಯ್ಕೆಯಾಗಿರುವ ಎರಡನೇ ಮೂಲನಿವಾಸಿ ನಾಯಕರಾಗಿದ್ದಾರೆ.
ಮಾರ್ಚ್ 13ರಂದು ವಿಧಾನಸಭಾ ಅಧಿವೇಶನದ ಮೊದಲ ದಿನ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಾಮ್ ಪಾದ ಜಮಾತಿಯಾ ಅವರ ಹೆಸರನ್ನು ವಿಧಾನಸಭಾ ಸ್ಪೀಕರ್ ಹುದ್ದೆಗೆ ಶಿಫಾರಸು ಮಾಡಿತ್ತು. ಬೇರಾರೂ ಈ ಹುದ್ದೆಗೆ ನಾಮಪತ್ರ ಸಲ್ಲಿಸದಿದ್ದುದರಿಂದ, ಹಂಗಾಮಿ ಸ್ಪೀಕರ್ ರಾಮ್ ಪ್ರಸಾದ್ ಪಾಲ್ ಅವರು ರಾಮ್ ಪಾದ ಜಮಾತಿಯಾ ಅವಿರೋಧವಾಗಿ ಸ್ಪೀಕರ್ ಹುದ್ದೆಗೆ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದ್ದಾರೆ.
ನೂತನ ಸ್ಪೀಕರ್ ರಾಮ್ ಪಾದ ಜಮಾತಿಯಾರನ್ನು ಅಭಿನಂದಿಸಿರುವ ಮುಖ್ಯಮಂತ್ರಿ ಮಾಣಿಕ್ ಸಹಾ, "ಅವರ ವ್ಯಾಪಕ ರಾಜಕೀಯ ಅನುಭವ, ವಿವೇಕ ಹಾಗೂ ಬದ್ಧತೆಯು ಸದನದ ಘನತೆಯನ್ನು ಎತ್ತಿ ಹಿಡಿಯಲಿದೆ ಹಾಗೂ ಕಲಾಪಗಳನ್ನು ಸಬಲಗೊಳಿಸಲಿದೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳಿದ್ದಾರೆ.
2018ರಲ್ಲಿ ಸಿಪಿಎಂ ನಾಯಕ ಹಾಗೂ ಮಾಜಿ ಅರಣ್ಯ ಸಚಿವ ನರೇಶ್ ಜಮಾತಿಯಾರನ್ನು ಬಾಗ್ಮಾ ವಿಧಾನಸಭಾ ಕ್ಷೇತ್ರದಿಂದ ರಾಮ್ ಪಾದ ಜಮಾತಿಯಾ ಪರಾಭವಗೊಳಿಸಿದ್ದರು. 2022ರಿಂದ 2023ರವರೆಗೆ ಅವರು ಮಾಣಿಕ್ ಸಹಾ ಅವರ ಸಂಪುಟದಲ್ಲಿ ಬುಡಕಟ್ಟು ಕಲ್ಯಾಣ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2023ರಲ್ಲಿ ಅವರು ಬಾಗ್ಮಾ ವಿಧಾನಸಭಾ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದರು.
ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ವಿಧಾನಸಭಾ ಸ್ಪೀಕರ್ ಬಿಸ್ವಬಂಧು ಸೇನ್ ಅವರು ಬೆಂಗಳೂರಿನಲ್ಲಿ ಮಿದುಳು ರಕ್ತಸ್ರಾವದಿಂದ ಮೃತಪಟ್ಟ ಬಳಿಕ, ಸ್ಪೀಕರ್ ಹುದ್ದೆ ಖಾಲಿಯಾಗಿತ್ತು. ನಾಲ್ಕು ಬಾರಿಯ ಶಾಸಕರಾಗಿದ್ದ ಬಿಸ್ವಬಂಧು ಸೇನ್ ಅವರು 2018ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು. 2023ರಲ್ಲಿ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದರು.

