ಡೆಹ್ರಾಡೂನ್: ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುವ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದ್ದಾರೆ.
213 ಕಿ.ಮೀ ಉದ್ದದ, ಆರು ಪಥಗಳ ಆರ್ಥಿಕ ಕಾರಿಡಾರ್ ಅನ್ನು ₹12,000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಈ ಕಾರಿಡಾರ್ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಇದು ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಆರು ಗಂಟೆಗಳಿಂದ ಎರಡೂವರೆ ಗಂಟೆಗೆ ಕಡಿಮೆ ಮಾಡಲಿದೆ.
ಪ್ರಮುಖ ಪ್ರವಾಸೋದ್ಯಮ ಮತ್ತು ಆರ್ಥಿಕ ಕೇಂದ್ರಗಳ ನಡುವೆ ಸಂಪರ್ಕ ಹೆಚ್ಚಿಸುವ ಮೂಲಕ ಪ್ರಾದೇಶಿಕ ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವಲ್ಲಿ ಈ ಕಾರಿಡಾರ್ ಪ್ರಮುಖ ಪಾತ್ರ ವಹಿಸಲಿದೆ.
ಹೈ-ಸ್ಪೀಡ್ ಸಂಪರ್ಕದೊಂದಿಗೆ ಪರಿಸರ ಸುಸ್ಥಿರತೆಯನ್ನು ಸಂಯೋಜಿಸುವ ಮುಂದಿನ ಪೀಳಿಗೆಯ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮೋದಿಯವರ ದೃಷ್ಟಿಕೋನವನ್ನು ಈ ಯೋಜನೆ ಪ್ರತಿಬಿಂಬಿಸುತ್ತದೆ ಎಂದು ವರದಿಯಾಗಿದೆ.
ಸುಗಮ ಸಂಚಾರಕ್ಕಾಗಿ ಈ ಯೋಜನೆಯಲ್ಲಿ 10 ಇಂಟರ್‌ಚೇಂಜ್‌ಗಳು, ಮೂರು ರೈಲ್ವೆ ಮೇಲ್ಸೇತುವೆಗಳು, ನಾಲ್ಕು ಪ್ರಮುಖ ಸೇತುವೆಗಳು ಸೇರಿದಂತೆ ಇತರೆ ಸೌಲಭ್ಯಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಪ್ರಯಾಣದ ಅನುಭವ ನೀಡಲು ಈ ಕಾರಿಡಾರ್ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ.
ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ: ಈ ಪ್ರದೇಶದ ಪರಿಸರ ಸೂಕ್ಷ್ಮತೆ ಮತ್ತು ಜೀವವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ಹಲವಾರು ವೈಶಿಷ್ಟ್ಯಗಳನ್ನು ವಿನ್ಯಾಸಗೊಳಿಸಲಾಗಿದೆ.
ವನ್ಯಜೀವಿ ಎಲಿವೇಟೆಡ್ ಕಾರಿಡಾರ್: ಏಷ್ಯಾದಲ್ಲೇ ಅತ್ಯಂತ ಉದ್ದದ (12 ಕಿ.ಮೀ) ವನ್ಯಜೀವಿ ಎಲಿವೇಟೆಡ್ ಕಾರಿಡಾರ್ ಅನ್ನು ಇಲ್ಲಿ ನಿರ್ಮಿಸಲಾಗಿದೆ. ಪ್ರಾಣಿಗಳ ಮುಕ್ತ ಸಂಚಾರಕ್ಕಾಗಿ ಎಂಟು ಪ್ರಾಣಿ ಪಥಗಳು, ತಲಾ 200 ಮೀಟರ್ ಉದ್ದದ ಎರಡು ಆನೆ ಕೆಳಸೇತುವೆಗಳು ಮತ್ತು ಮಾ ದಾತ್ ಕಾಳಿ ದೇವಾಲಯದ ಬಳಿ 370 ಮೀಟರ್ ಉದ್ದದ ಸುರಂಗವನ್ನು ನಿರ್ಮಿಸಲಾಗಿದೆ.

