ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಐ-ಪ್ಯಾಕ್ ಸಹಸ್ಥಾಪಕ ಮತ್ತು ನಿರ್ದೇಶಕ ವಿನೇಶ್ ಚಾಂಡೆಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದ್ದು, ದೆಹಲಿ ನ್ಯಾಯಾಲಯವು ಅವರನ್ನು 10 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿದೆ.
2015ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಪಕ್ಷಗಳಿಗೆ ಚುನಾವಣಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದೆ.
ಈ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ಕ್ರಮ ಕೈಗೊಳ್ಳಲಾಗಿದೆ.
ಸೋಮವಾರ ವಿಚಾರಣೆಯ ನಂತರ ಚಾಂಡೆಲ್ ಅವರನ್ನು ಬಂಧಿಸಲಾಯಿತು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಚಾಂಡೆಲ್ ಐ-ಪ್ಯಾಕ್‌ನಲ್ಲಿ ಶೇಕಡ 33ರಷ್ಟು ಪಾಲುದಾರಿಕೆ ಹೊಂದಿದ್ದಾರೆ.
ಏನಿದು ಪ್ರಕರಣ?
ಮಾರ್ಚ್ 28ರಂದು ದಾಖಲಾದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಿರುವ ಪ್ರಕರಣ ಸಂಬಂಧ ಚಾಂಡೆಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಐ-ಪ್ಯಾಕ್ ಸಂಸ್ಥೆಯು ಖಾತೆಗಳನ್ನು ತಿರುಚಿದೆ ಮತ್ತು ವಿನೇಶ್ ಚಾಂಡೆಲ್, ಪ್ರತೀಕ್ ಜೈನ್ ಹಾಗೂ ರಿಷಿ ರಾಜ್ ಸಿಂಗ್ ಅವರು ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಈ ಪ್ರಕರಣವು ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣದ ತನಿಖೆಗೆ ಸಂಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ ಕೋಲ್ಕತ್ತದಲ್ಲಿ ಇಡಿ ದಾಳಿ ನಡೆಸಿದ ನಂತರ, ಖಂಡೇಲ್ ಅವರು ಪ್ರಮುಖ ಉದ್ಯೋಗಿಗಳ ಇ-ಮೇಲ್ ಮತ್ತು ಸೂಕ್ಷ್ಮ ಡೇಟಾವನ್ನು ಅಳಿಸಲು ಸೂಚಿಸುವ ಮೂಲಕ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಅನೇಕರು ಚಾಂಡೆಲ್ ಬಂಧನ ಖಂಡಿಸಿದ್ದಾರೆ.
ಇದೇ ಜನವರಿಯಲ್ಲಿ ಕೋಲ್ಕತ್ತದ ಐ-ಪ್ಯಾಕ್ ಕಚೇರಿಯ ಮೇಲೆ ಇಡಿ ದಾಳಿ ನಡೆಸಿದಾಗ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಥಳಕ್ಕೆ ಆಗಮಿಸಿ ಕೆಲವು ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು ಮತ್ತು ತನಿಖೆಗೆ ಅಡ್ಡಿಪಡಿಸಿದ್ದರು ಎಂದು ಇಡಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಟಿಎಂಸಿ, ಇಡಿ ಸಂಸ್ಥೆಯು ಚುನಾವಣಾ ಕಾರ್ಯತಂತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ತಿರುಗೇಟು ನೀಡಿತ್ತು.

