ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಪ್ರತಿದಿನ ಸರಾಸರಿ 20ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು ವಿದೇಶಗಳಲ್ಲಿ ಮೃತಪಟ್ಟಿದ್ದಾರೆ. ಅದರಲ್ಲೂ ಹೆಚ್ಚಿನ ಸಾವುಗಳು ಕೊಲ್ಲಿ ರಾಷ್ಟ್ರಗಳಲ್ಲಿ ಸಂಭವಿಸಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಜನವರಿ 29ರಂದು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ, ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಾರ್ಮಿಕರ ಸ್ಥಿತಿಗತಿಗಳ ಕುರಿತ ಆತಂಕಕಾರಿ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
'2021ರಿಂದ 2025ರ ನಡುವೆ ವಿದೇಶಗಳಲ್ಲಿ ಒಟ್ಟು 37,740 ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ. ಒಟ್ಟು ಸಾವುಗಳಲ್ಲಿ ಶೇಕಡ 86ಕ್ಕಿಂತ ಹೆಚ್ಚು ಕೊಲ್ಲಿ ರಾಷ್ಟ್ರಗಳಲ್ಲೇ ಸಂಭವಿಸಿವೆ' ಎಂದು ಅವರು ಹೇಳಿದ್ದಾರೆ. ಆದರೆ, ಈ ಸಾವುಗಳಿಗೆ ಕಾರಣಗಳೇನು ಎಂಬ ವಿವರಗಳನ್ನು ಅವರು ಒದಗಿಸಿಲ್ಲ.
ಅದರಲ್ಲೂ 2021ರಲ್ಲಿ ಅತೀ ಹೆಚ್ಚು ಭಾರತೀಯರು ವಿದೇಶಗಳಲ್ಲಿ ಮೃತಪಟ್ಟಿದ್ದಾರೆ ಎಂಬ ವಿವರ ಅಂಕಿ-ಅಂಶಗಳಲ್ಲಿದೆ.
ಶೋಷಣೆ ಬಗ್ಗೆ 81000 ದೂರು:
ವಿವಿಧ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ 2021ರಿಂದ 2025ರವರೆಗೆ ಶೋಷಣೆ, ನಿಂದನೆ ಮತ್ತು ಕೆಲಸದ ಸ್ಥಳದಲ್ಲಿನ ಸಮಸ್ಯೆಗಳ ಕುರಿತು 80,985 ದೂರುಗಳು ಭಾರತೀಯ ಪ್ರಜೆಗಳಿಂದ ಬಂದಿದ್ದವು.
2025ರಲ್ಲಿ ಗರಿಷ್ಠ 22,479 ದೂರುಗಳು ದಾಖಲಾಗಿದ್ದವು. 2024ರಲ್ಲಿ 16,263 ಮತ್ತು 2021ರಲ್ಲಿ 11,632 ದೂರುಗಳು ಬಂದಿದ್ದವು.
ಯುಎಇಯಲ್ಲಿ ಅತೀ ಹೆಚ್ಚು 16,965 ದೂರುಗಳು ದಾಖಲಾಗಿದ್ದು, ನಂತರದ ಸ್ಥಾನಗಳಲ್ಲಿ ಕುವೈತ್ (15,234), ಒಮಾನ್ (13,295) ಮತ್ತು ಸೌದಿ ಅರೇಬಿಯಾ (12,988) ಇವೆ.
ಸಂಬಳ ನೀಡದಿರುವ ದೂರುಗಳೇ ಹೆಚ್ಚು:
ವಿದೇಶಗಳಲ್ಲಿ ಭಾರತೀಯ ಕಾರ್ಮಿಕರು ಎದುರಿಸುವ ಅತ್ಯಂತ ಸಾಮಾನ್ಯ ತೊಂದರೆಗಳಲ್ಲಿ ಸಂಬಳ ಮತ್ತು ಸೇವಾವಧಿಯ ಪ್ರಯೋಜನಗಳ ವಿಳಂಬ ಅಥವಾ ಪಾವತಿ ಮಾಡದಿರುವ ಸಮಸ್ಯೆಗಳೇ ಹೆಚ್ಚಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪಾಸ್ಪೋರ್ಟ್ ಅನಧಿಕೃತವಾಗಿ ಇಟ್ಟುಕೊಳ್ಳುವುದು, ರಜೆ ನೀಡದಿರುವುದು. ಹೆಚ್ಚುವರಿ ಕೆಲಸದ ಅವಧಿಗೆ ವೇತನ ನೀಡದಿರುವುದು, ಕಂಪನಿಗಳನ್ನು ಹಠಾತ್ ಬಂದ್ ಮಾಡುವುದು ಇತರ ಸಾಮಾನ್ಯ ಸಮಸ್ಯೆಗಳಾಗಿವೆ.ಕೀರ್ತಿ ವರ್ಧನ್ ಸಿಂಗ್ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ
_ಕೀರ್ತಿ ವರ್ಧನ್ ಸಿಂಗ್ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವಸಂಕಷ್ಟದಲ್ಲಿರುವ ಭಾರತೀಯ ಪ್ರಜೆಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಆತಿಥೇಯ ದೇಶದ ವಿದೇಶಾಂಗ ಸಚಿವಾಲಯ ಕಾರ್ಮಿಕ ಇಲಾಖೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಸಂಪರ್ಕಿಸಿ.
ಕೊಲ್ಲಿ ರಾಷ್ಟ್ರಗಳಲ್ಲಿ ಸಾವು ಹೆಚ್ಚಳ 2012-2018ರ ಮಧ್ಯಭಾಗದವರೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ಪ್ರತಿದಿನ ಸುಮಾರು 10 ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಹಕ್ಕು (ಆರ್ಟಿಐ) ಪ್ರತಿಕ್ರಿಯೆಗಳ ವಿಶ್ಲೇಷಣೆ ಮತ್ತು ಕಾಮನ್ವೆಲ್ತ್ ಮಾನವ ಹಕ್ಕುಗಳ ಉಪಕ್ರಮದ (ಸಿಎಚ್ಆರ್ಐ) ಸಂಸದೀಯ ದಾಖಲೆಗಳ ಆಧಾರದಲ್ಲಿ ಪಿಟಿಐ 2018ರಲ್ಲಿ ವರದಿ ಮಾಡಿತ್ತು. ಈ ಆರೂವರೆ ವರ್ಷಗಳಲ್ಲಿ ಆರು ಕೊಲ್ಲಿ ರಾಷ್ಟ್ರಗಳಾದ ಬಹರೇನ್ ಒಮಾನ್ ಕತಾರ್ ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿ ಕನಿಷ್ಠ 24570 ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸಿಎಚ್ಆರ್ಐ ವಿಶ್ಲೇಷಿಸಿದೆ. ಈ ಅಂಕಿ ಅಂಶಗಳಿಗೆ ಹೋಲಿಸಿದರೆ 2021-2025 ನಡುವೆ ಬಹರೇನ್ ಹೊರತುಪಡಿಸಿ ಕೊಲ್ಲಿ ರಾಷ್ಟ್ರಗಳಲ್ಲಿ 32608 ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸರ್ಕಾರಿ ದತ್ತಾಂಶವು ಹೇಳುತ್ತದೆ. ಇದರರ್ಥ ಕಳೆದ ಐದು ವರ್ಷಗಳಲ್ಲಿ ಕೊಲ್ಲಿ ದೇಶಗಳಲ್ಲಿ ಪ್ರತಿದಿನ ಸರಾಸರಿ 18 ಕಾರ್ಮಿಕರು ಮೃತಪಟ್ಟಿದ್ದಾರೆ.
ಮಲೇಷ್ಯಾ- ಆಗ್ನೇಯ ಏಷ್ಯಾದಲ್ಲೂ ಸಮಸ್ಯೆ ಕೊಲ್ಲಿ ರಾಷ್ಟ್ರಗಳನ್ನು ಹೊರತುಪಡಿಸಿ ಮಲೇಷ್ಯಾ ಮತ್ತು ಮಾಲ್ದೀವ್ಸ್ನಲ್ಲಿ ಕೂಡಾ ಭಾರತೀಯ ಕಾರ್ಮಿಕರಿಗೆ ಸಮಸ್ಯೆಗಳು ಉಂಟಾಗಿದ್ದು ಕ್ರಮವಾಗಿ 8333 ಮತ್ತು 2981 ದೂರುಗಳು ದಾಖಲಾಗಿವೆ. ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಕಡಿಮೆ ಸಾವು-ನೋವುಗಳು ವರದಿಯಾದರೂ ಗಮನಾರ್ಹ ಸಂಖ್ಯೆಯ ದೂರುಗಳು ಬಂದಿವೆ. ಮ್ಯಾನ್ಮಾರ್ನಲ್ಲಿ ಐದು ವರ್ಷಗಳಲ್ಲಿ ಭಾರತದ ಯಾವುದೇ ಕಾರ್ಮಿಕ ಸಾವಿಗೀಡಾಗಿಲ್ಲ. ಆದರೆ 2548 ದೂರುಗಳು ದಾಖಲಾಗಿವೆ. ಕಾಂಬೋಡಿಯಾದಲ್ಲಿ 31 ಸಾವುಗಳು ದಾಖಲಾಗಿದ್ದು 2531 ದೂರುಗಳು ಬಂದಿವೆ. ಲಾವೋಸ್ನಲ್ಲಿ 11 ಸಾವು ಸಂಭವಿಸಿದ್ದು 2416 ದೂರುಗಳು ದಾಖಲಾಗಿವೆ.

